ಮುಂಪುಟ

ಭಾರತವೆಂಬ ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ವಿವಿಧತೆಯಲ್ಲಿ ಏಕತೆಯೇ ಈ ಒಕ್ಕೂಟದ ಜೀವಾಳ ಅನ್ನುವ ಮಾತನ್ನು ನಾವೆಲ್ಲರೂ ಕೇಳುತ್ತಲೇ ಬೆಳೆದಿದ್ದೇವೆ. ಆದರೆ ಭಾರತದ ಭಾಷಾ ನೀತಿಯನ್ನು ಗಮನಿಸಿದಾಗ ಸಮಾನತೆ, ವಿವಿಧತೆಯಲ್ಲಿ ಏಕತೆ ಅನ್ನುವುದೆಲ್ಲ ಕೇವಲ ತೋರಿಕೆಯ ಹೇಳಿಕೆ ಅನ್ನಿಸುವುದು.  ಭಾರತಕ್ಕೆ ಯಾವುದೇ ರಾಷ್ಟ್ರ ಭಾಷೆಯನ್ನು ಸಂವಿಧಾನದಲ್ಲಿ ಬರೆಯಲಾಗಿಲ್ಲದಿದ್ದರೂ ಆಡಳಿತ ಭಾಷೆ ಅನ್ನುವ ಹೆಸರಿನಲ್ಲಿ ಕೇಂದ್ರ ಸರ್ಕಾರ ತನ್ನೆಲ್ಲ ಕಚೇರಿಗಳಲ್ಲಿ ಹಿಂದೀಯ ಕಡ್ಡಾಯ ಬಳಕೆ ಹೆಚ್ಚಿಸುವತ್ತ ಭಾಷಾ ನೀತಿ ರೂಪಿಸಿಕೊಂಡು ಕೆಲಸ ಮಾಡುವ ಮೂಲಕ ಹಿಂದಿಯೇತರ ನುಡಿಗಳನ್ನು ಮೂಲೆಗುಂಪಾಗಿಸುತ್ತಿದೆ. ಇದು ಒಕ್ಕೂಟ ಧರ್ಮದ ಆಶಯಕ್ಕೂ ವಿರುದ್ಧವಾದುದಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಗೌರವ, ಸ್ಥಾನಮಾನ ಕೊಟ್ಟು, ಎಲ್ಲ ಭಾಷಿಕರನ್ನೂ ಒಂದೆನ್ನುವಂತೆ ಕಾಣಬೇಕಾದ ಕೇಂದ್ರ ಸರ್ಕಾರವು ಕೇವಲ ಹಿಂದೀಯೊಂದರ ಪ್ರಚಾರಕ್ಕೆ, ಪ್ರಸಾರಕ್ಕೆ ತೆರಿಗೆದಾರರ ಹಣ ಬಳಸಿ ಹಿಂದಿ ಸಪ್ತಾಹದಂತಹ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಕಳವಳ ತರುವಂತದ್ದು. ಈಗಾಗಲೇ ಕರ್ನಾಟಕದ ಉದ್ದಗಲಕ್ಕೂ ಅಂಚೆ, ಬ್ಯಾಂಕು, ವಿಮೆ, ರೈಲ್ವೆ, ತೆರಿಗೆ ಹೀಗೆ ಹಲವಾರು ಕೇಂದ್ರ ಸರ್ಕಾರಿ ಕಛೇರಿಗಳ ಆಡಳಿತದಲ್ಲಿ ಕನ್ನಡ ಮಾಯವಾಗುತ್ತಿದ್ದು, ಆ ಜಾಗದಲ್ಲಿ ಇಲ್ಲಿನ ಜನರ ನುಡಿಯಲ್ಲದ ಹಿಂದಿಯನ್ನು ಹೇರುತ್ತಿರುವುದು ಕಂಡು ಬರುತ್ತಿದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರಿ ಉದ್ಯೋಗ ಬೇಕೆಂದರೆ ಹಿಂದಿ ಕಲಿತಿರಲೇಬೇಕು ಅನ್ನುವಂತಹ ನಿಯಮಗಳ ಮೂಲಕ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ವಿಷಯದಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಜೊತೆಯಲ್ಲೇ ಹಿಂದಿ ರಾಶ್ಟ್ರ ಭಾಷೆ ಅನ್ನುವ ಸುಳ್ಳನ್ನು ಶಾಲೆಯಲ್ಲಿ ವ್ಯವಸ್ಥಿತವಾಗಿ ಕಲಿಸುವ ಮೂಲಕ ಮಕ್ಕಳ ಮನಸ್ಸನ್ನು ಹಿಂದಿ ಹೇರಿಕೆಗೆ ಪಕ್ವಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮನರಂಜನೆ, ಆಡಳಿತ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲ ರಂಗಗಳ ಮೂಲಕ ತಡೆಯಿರದೇ ನಡೆಯುತ್ತಿರುವ ಹಿಂದಿ ಹೇರಿಕೆಯಿಂದ ಭಾರತದ ಹಿಂದಿಯೇತರ ನುಡಿಗಳು ತಮ್ಮ ನೆಲದಲ್ಲೇ ಮೂಲೆಗುಂಪಾಗುವುದರ ಜೊತೆ, ಆ ಭಾಷಿಕರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸಿದೆ. ಇದೇ ವೇಗದಲ್ಲಿ ಹಿಂದಿಯ ಹೇರಿಕೆ ಮುಂದುವರೆದರೆ ಇನ್ನೊಂದು ಪೀಳಿಗೆಯ ಅವಧಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಆಡಳಿತದಲ್ಲಿ, ಮಾರುಕಟ್ಟೆಯಲ್ಲಿ ಸಿಗಬೇಕಾದ ಸ್ಥಾನ ಸಿಗದೇ ಕಣ್ಮರೆಯಾಗುವ ಸನ್ನಿವೇಶ ಬರಬಹುದು. ಆದ್ದರಿಂದ ಎಲ್ಲ ಭಾಷಿಕರಿಗೂ ಒಪ್ಪುವಂತಹ ಭಾಷಾ ನೀತಿಯೊಂದನ್ನು ರೂಪಿಸುವತ್ತ ಕೇಂದ್ರದ ಮೇಲೆ ಒತ್ತಡ ತರುವ ಹೊಣೆಗಾರಿಕೆ ಹಿಂದಿ ಮತ್ತು ಎಲ್ಲ ಹಿಂದಿಯೇತರ ರಾಜ್ಯಗಳ ಮೇಲಿದೆ. ಭಾರತ ಒಕ್ಕೂಟ ಒಂದಾಗಿ ಮುಂದುವರೆಯಲು ಇದು ಅತ್ಯಂತ ಅವಶ್ಯಕವೂ ಹೌದು. ಈ ನಿಟ್ಟಿನಲ್ಲಿ ಭಾರತದ ಭಾಷಾ ನೀತಿಗೆ ತಿದ್ದುಪಡಿ ತಂದು ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಅಧಿಕೃತ ಸ್ಥಾನಮಾನ ಕಲ್ಪಿಸಬೇಕು ಅನ್ನುವ ಬೇಡಿಕೆಯೊಂದಿಗೆ ಈ ಅಭಿಯಾನದ ವೇದಿಕೆಯನ್ನು ರೂಪಿಸಲಾಗಿದೆ. ಈ ಬೇಡಿಕೆಯತ್ತ ಈವರೆಗೆ ಮಾಡಲಾಗಿರುವ ಸಹಿ ಸಂಗ್ರಹ ಅಭಿಯಾನ, ಜಾಗೃತಿ ಕಾರ್ಯಕ್ರಮ, ಪತ್ರ ಚಳುವಳಿ, ಪುಸ್ತಕ ಪ್ರಕಟನೆ ಮುಂತಾದ ಚಟುವಟಿಕೆಗಳ ಬಗ್ಗೆ ಸಮಗ್ರ ವಿವರ ಇಲ್ಲಿ ದೊರೆಯಲಿದೆ. ಬನ್ನಿ, ಭಾಷಾ ಸಮಾನತೆಗಾಗಿನ ಈ ಬೇಡಿಕೆಯನ್ನು ಬೆಂಬಲಿಸಿ, ಬದಲಾವಣೆಯತ್ತ ಕೈ ಜೋಡಿಸಿ.

ಬನವಾಸಿ ಬಳಗದ ಶ್ರೀ ಆನಂದ್ ಅವರು ಹಿಂದಿ ಹೇರಿಕೆಯ ಇತಿಹಾಸ, ಹಿಂದಿಯನ್ನು ಕಡ್ಡಾಯವಾಗಿ ಹೇರುವುದರಿಂದ ಹಿಂದಿಯೇತರ ಭಾಷಿಕ ಜನಾಂಗಗಳ ಮೇಲಾಗುವ ದುಷ್ಪರಿಣಾಮಗಳು ಮತ್ತು ಸಮಾನ ಭಾಷಾನೀತಿಯ ಅಗತ್ಯತೆಯ ಬಗ್ಗೆ ಮಾತನಾಡಿರುವ ವೀಡಿಯೋ ತುಣುಕು.