ಚೆನ್ನೈ ಭಾಷಾ ಹಕ್ಕುಗಳ ಘೋಷಣೆ

ಭಾರತ ಒಕ್ಕೂಟ ಸರಕಾರವು ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತ್ರ ಅಧಿಕೃತ ಭಾಷೆಗಳೆಂದು ಗುರುತಿಸಿ, ಹಿಂದಿ ಭಾಷೆಯ ಬೆಳವಣಿಗೆಗೆ ಮಾತ್ರ ಹೆಚ್ಚಿನ ಸಂಪನ್ಮೂಲವನ್ನು ಒದಗಿಸುತ್ತಾ ಬಂದಿರುವುದು, ಹಿಂದಿಯೇತರ ನುಡಿಗಳಿಗೆ ಹಲವಾರು ವಲಯಗಳಲ್ಲಿ ಹಿನ್ನಡೆಯನ್ನುಂಟುಮಾಡಿದೆ. ನೇರವಾಗಿ ಜನರ ಒಡನಾಟವಿರುವ ಹಲವಾರು ವಲಯಗಳಲ್ಲಿ ಸಹಜವಾಗಿ ಜನರ ನುಡಿಯೇ ಬಳಕೆಯಾಗಬೇಕಿದ್ದು, ಅಂತಹ ಕಡೆಗಳಲ್ಲಿಯೂ ಹಿಂದಿಯೇತರ ನುಡಿಗಳಿಗೆ ಜಾಗ ಮತ್ತು ಮನ್ನಣೆ ಸಿಗದೇ ಇರುವುದು ಕಂಡುಬರುತ್ತಿದೆ. ಭಾರತ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡಿರುವ ಭಾಷೆಗಳಿಗೇ ಇವತ್ತು ಇಂತಹ ಸವಾಲು ಎದುರಾಗಿದ್ದು, ಸಹಜವಾಗಿ ಅ ಎಲ್ಲಾ ಭಾಷಿಕರನ್ನು ಕಳವಳಕ್ಕೀಡುಮಾಡಿದೆ. ಕಡಿಮೆ ಎಣಿಕೆಯ ಭಾಷಿಕರನ್ನು ಹೊಂದಿರುವ ನುಡಿಗಳು ಜಾಗತೀಕರಣದ ಸವಾಲುಗಳು ಮತ್ತು ಭಾರತ ಒಕ್ಕೂಟ ಸರಕಾರದ ಹಿಂದಿ ಹೇರಿಕೆ ನೀತಿಗಳ ಎದುರು, ಎಂದೆಂದಿಗೂ ಮರೆಯಾಗಿ ಹೋಗುವ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಭಾರತ ಒಕ್ಕೂಟದಲ್ಲಿ ಭಾಷಾ ಹಕ್ಕುಗಳ ಕಡೆಗಣನೆ ನಡೆಯುತ್ತಿದ್ದು, ಹಿಂದಿಯೇತರ ನುಡಿಗಳನ್ನಾಡುವ ಜನರ ಕಳವಳಕ್ಕೆ ಭಾಷಾ ಹಕ್ಕುಗಳ ಕಡೆಗಣನೆ ಮುಖ್ಯವಾದ ಕಾರಣವಾಗಿದೆ. ಈ ಹೊತ್ತಿನಲ್ಲಿ ಭಾಷಾ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಮತ್ತು ಭಾಷಾ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ಒಕ್ಕೂಟ ಸರಕಾರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸುವ ಸಲುವಾಗಿ, ಇದೇ ಸೆಪ್ಟೆಂಬರ್ ತಿಂಗಳ 19 ಮತ್ತು 20ರಂದು ಚೆನ್ನೈನಲ್ಲಿ ’ಭಾಷಾ ಹಕ್ಕುಗಳ ಸಮ್ಮೇಳನ’ವನ್ನು ‘ತಮಿಳು ಮೋಳಿಯುರಿಮೈ ಕೂಟ್ಟಿಯಕ್ಕಂ’ (ತಮಿಳು ಭಾಷಾ ಹಕ್ಕುಗಳ ಒಕ್ಕೂಟ) ವತಿಯಿಂದ ಆಯೋಜಿಸಲಾಗಿತ್ತು. ಸಮ್ಮೇಳನದಲ್ಲಿ ಶೈಕ್ಷಣಿಕ ಮತ್ತು ಭಾಷಾ ಹಕ್ಕುಗಳ ಹೋರಾಟಗಾರರು ಪಾಲ್ಗೊಂಡಿದ್ದರು. ಪಂಜಾಬ್, ಪಶ್ಚಿಮ ಬಂಗಾಳ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಒಡಿಷಾ ಮತ್ತು ತಮಿಳುನಾಡಿನ ಜನರು ಈ ಸಮ್ಮೇಳನದಲ್ಲಿ ಪಾಲ್ಗೊಂಡು “ಚೆನ್ನೈ ಭಾಷಾ ಹಕ್ಕುಗಳ ಘೋಷಣಾ ಪತ್ರ”ವನ್ನು ರೂಪಿಸಿದರು

ಘೋಷಣಾ ಪತ್ರದ ಕನ್ನಡ ಅನುವಾದವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ: ಚೆನ್ನೈ ಭಾಷಾ ಹಕ್ಕುಗಳ ಘೋಷಣೆ-20-Sep-2015

Posted on September 28, 2015, in ಕಾರ್ಯಕ್ರಮಗಳು and tagged , . Bookmark the permalink. Comments Off on ಚೆನ್ನೈ ಭಾಷಾ ಹಕ್ಕುಗಳ ಘೋಷಣೆ.

Comments are closed.

%d bloggers like this: