Author Archives: Admin

RTI ಗೆ ರೈಲ್ವೇಸ್ ನಿಂದ ಬಂದ ಉತ್ತರಗಳು

ಸೆಪ್ಟೆಂಬರ್ 2012 ರಂದು ವಲ್ಲೀಶ್ ಕುಮಾರ್ ಅವರು ಭಾರತೀಯ ರೈಲ್ವೇಸ್ ನಲ್ಲಿ ಅನುಸರಿಸುವ ಭಾಷಾ ನೀತಿ ಕುರಿತು ಮಾಹಿತಿಯನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಒಂದು ಅರ್ಜಿ ಹಾಕಿದ್ದರು. ಅದರ ಸಾರಾಂಶ ಹೀಗಿದೆ.

20-9-2012 ರಂದು ಸಲ್ಲಿಸಿದ ಮಾಹಿತಿ ಹಕ್ಕಿನ ಅರ್ಜಿಯಲ್ಲಿನ ಪ್ರಶ್ನೆಗಳು:

೧. ಭಾರತೀಯ ರೈಲ್ವೇ ಪ್ರಯಾಣದ ಟಿಕೇಟನ್ನು ಮುದ್ರಿಸುವಾಗ ಅನುಸರಿಸುವ ಭಾಷಾನೀತಿ ಯಾವುದು?

೨. ಕರ್ನಾಟಕದಲ್ಲಿರುವ ರೈಲ್ವೇ ನಿಲ್ದಾಣಗಳಲ್ಲಿ ನೀಡಲಾಗುವ ರೈಲ್ವೇ ಪ್ರಯಾಣದ ಟಿಕೇಟನ್ನು ಮುದ್ರಿಸುವಾಗ ಅನುಸರಿಸುವ ಭಾಷಾನೀತಿ ಯಾವುದು?

೩. ಈ ಅರ್ಜಿಗೆ ಲಗತ್ತಿಸಿರುವ ರೈಲ್ವೇ ಟಿಕೇಟಿನಲ್ಲಿ ರೈಲ್ವೇ ಇಲಾಖೆ ಸೂಚಿಸಿರುವ ಭಾಷಾನೀತಿಯನ್ನು ಸರಿಯಾಗಿ ಪಾಲಿಸಲಾಗಿದೆಯೇ?

18-10-2012ರಂದು ನೈರುತ್ಯ ರೈಲ್ವೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಂದ ಬಂದ ಉತ್ತರ

 1 ಮತ್ತು 2ನೇ ಪ್ರಶ್ನೆಗೆ ಉತ್ತರ:

ಕರ್ನಾಟಕಕ್ಕೆ ಅಂತ ಬೇರೊಂದು ಭಾಷಾನೀತಿ ಇಲ್ಲ. ಟಿಕೆಟಿನ ಮೇಲೆ ಬಳಸಬೇಕಾದ ಭಾಷೆಗಳ ಬಗ್ಗೆ ಮಾಹಿತಿಗೆ ರೈಲ್ವೆ ಕಾಯ್ದೆ (1989)ರ ಪ್ರತಿಯನ್ನು ಲಗತ್ತಿಸಲಾಗಿದೆ. ಇದರೊಂದಿಗೆ ಇದೇ ವಿಷಯವಾಗಿ ರೈಲ್ವೆ ಇಲಾಖೆಯಲ್ಲಿ ನಡೆದಿರುವ ಪತ್ರ ವ್ಯವಹಾರದ ಕುರಿತು ಮಾಹಿತಿಗೆ ರೈಲ್ವೆ ಬೋರ್ಡಿನಿಂದ ಬಂದಿರುವ ಪತ್ರ ಸಂಖ್ಯೆ: 2010/C&IS/UTS/Multilingual Ticket/Pnr/I ದಿನಾಂಕ 5-12-2011 ಅನ್ನು ಲಗತ್ತಿಸಲಾಗಿದೆ.

 3ನೇ ಪ್ರಶ್ನೆಗೆ ಉತ್ತರ:

ನೀವು ಲಗತ್ತಿಸಿರುವ ಟಿಕೇಟಿನಲ್ಲಿ ರೈಲ್ವೇ ಇಲಾಖೆಯ ಸದ್ಯದ ನಿಯಮಗಳಿಗೆ  ಒಪ್ಪುವಂತ ಭಾಷಾನೀತಿಯನ್ನು ಪಾಲಿಸಲಾಗಿದೆ.

ಉತ್ತರದ ಪ್ರತಿಯನ್ನು ಈ ಕೆಳಗೆ ನೋಡಬಹುದಾಗಿದೆ.

Railways_RTI - Copy

 

railways-act-1989

ರೈಲ್ವೇಸ್ ಆಕ್ಟ್ ನಂಬರ್ 24, 1989 ರ ಸಾರಾಂಶ ಕೆಳಗಿದೆ:

1989ರ ರೈಲ್ವೇ ಕಾಯಿದೆ  ಸಂಖ್ಯೆ: 24

1989ರ ರೈಲ್ವೇ ಕಾಯಿದೆ  ಸಂಖ್ಯೆ 24ರಲ್ಲಿ ಈ ಕೆಳಕಂಡ ವಿಷಯಗಳ ನಿರ್ವಹಣೆಯ ಕುರಿತು ಪ್ರಸ್ತಾಪಿಸಲಾಗಿದೆ:

ದುಡ್ಡು ಪಡೆದು ಟಿಕೆಟ್ ಕೊಡುವುದು

50 (1) ರೈಲಿನಲ್ಲಿ ಪ್ರಯಾಣಿಸಲು ಬಯಸುವವರಿಗೆ ರೈಲ್ವೇ ಸಿಬ್ಬಂದಿ ಅಥವಾ ರೈಲ್ವೆಯ ಯಾವುದೇ ಅಧಿಕೃತ ಏಜೆಂಟ್ ಹಣವನ್ನು ಪಡೆದುಕೊಂಡು ಟಿಕೆಟ್ ಕೊಡಬಹುದು.  ಈ ರೀತಿ ಕೊಡಲಾಗುವ ಟಿಕೇಟಿನಲ್ಲಿ ಈ ಕೆಳಕಂಡ ವಿವರಗಳು  ಇರತಕ್ಕದ್ದು:

(i)ಟಿಕೆಟ್ ನೀಡಿದ ದಿನಾಂಕ;

(ii)ಪ್ರಯಾಣದ ದರ್ಜೆ;

(iii)ಹೊರಡುವ ಮತ್ತು ತಲುಪುವ ನಿಲ್ದಾಣಗಳ ಹೆಸರು; ಮತ್ತು

(iv)ಟಿಕೆಟ್ ಮೊತ್ತ

(2) 1ನೇ ವಿಭಾಗದಲ್ಲಿ ಪಟ್ಟಿಮಾಡಲಾದ ವಿವರಗಳಲ್ಲಿ (ii)ಮತ್ತು (iii)ರ ವಿವರವನ್ನು ಈ ರೀತಿ ನೀಡಿರಬೇಕು–

(a)ಅತ್ಯಂತ ಕೆಳ ದರ್ಜೆಯ ರೈಲ್ವೇ ಪ್ರಯಾಣದ ಟಿಕೇಟ್ ಆದಲ್ಲಿ ಹಿಂದಿ, ಇಂಗ್ಲೀಷ್ ಮತ್ತು ಯಾವ ಸ್ಥಳದಲ್ಲಿ ಟಿಕೆಟ್ ನೀಡಲಾಗಿದೆಯೋ ಆ ಸ್ಥಳದ ಭಾಷೆಯನ್ನು ಬಳಸತಕ್ಕದ್ದು. ಮತ್ತು

(b)ಬೇರಾವುದೇ ದರ್ಜೆಯ ಟಿಕೆಟಿನಲ್ಲಿ ಹಿಂದಿ ಮತ್ತು ಇಂಗ್ಲೀಷ್ ಬಳಸತಕ್ಕದ್ದು

ತಾಂತ್ರಿಕ ಕಾರಣಗಳಿಂದ ಅಥವಾ ಬೇರಾವುದೇ ಕಾರಣಗಳಿಂದ ಈ ಯಾವುದೇ ಭಾಷೆಯಲ್ಲಿ ಮಾಹಿತಿಯನ್ನು ನೀಡುವುದು ಆಗದಿದ್ದಲ್ಲಿ, ಕೇಂದ್ರ ಸರ್ಕಾರವು ಈ ಮೂರರಲ್ಲಿ ಯಾವ ಭಾಷೆಯನ್ನಾದರೂ ಕೈಬಿಡಬಹುದು.

ಮೇಲಿನ ಉತ್ತರಕ್ಕೆ ಪ್ರತ್ಯುತ್ತರವಾಗಿ ಜನವರಿ 2013 ರಂದು  ಮತ್ತೊಂದು RTI ಸಲ್ಲಿಸಲಾಗಿತ್ತು. ಅದರ ಸಾರಾಂಶ ಕೆಳಗಿದೆ.

 1. ರೈಲ್ವೆ ಆಕ್ಟ್ ನಂಬರ್  24, 1989ರ ಪ್ರಕಾರ ರೈಲ್ವೆ ಟಿಕೆಟ್ ನೀಡುವ ಸ್ಥಳದಿಂದ ಟಿಕೆಟ್ ನಲ್ಲಿ  ಹಿಂದಿ, ಇಂಗ್ಲಿಷ್ ಅಥವಾ ಆ ರಾಜ್ಯದ ಭಾಷೆಯನ್ನೂ ತಾಂತ್ರಿಕ ಕಾರಣಗಳಿಂದಾಗಿ  ಕೈಬಿಡಬಹುದು ಎಂದು ತಿಳಿಸಲಾಗಿದೆ.  ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ವಿತರಿಸುವ ಪ್ರಯಾಣಿಕರ ಟಿಕೆಟ್ ಗಳಲ್ಲಿ  ಕನ್ನಡ ಭಾಷೆಯನ್ನು  ತೆಗೆದುಹಾಕಲು ಕಾರಣವೇನು ?
 2. ಕರ್ನಾಟಕದಲ್ಲಿರೈಲ್ವೆ ಟಿಕೆಟ್ಗಳಲ್ಲಿ  ಕನ್ನಡ ಭಾಷೆಯ ಮುದ್ರಣ ಯಾವಾಗ ನಿಲ್ಲಿಸಲಾಯಿತು?
 3.  ರೈಲ್ವೆ ಪ್ರಯಾಣಿಕರ ಟಿಕೆಟ್ ಗಳಲ್ಲಿ  ಕನ್ನಡ ಭಾಷೆಯಲ್ಲಿ  ಮುದ್ರಿಸದಿರಲು ರೈಲ್ವೆ ಇಲಾಖೆಯಿಂದ ಯಾವುದಾದರು ಆದೇಶಗಳು/ಸುತ್ತೋಲೆಗಳು ಇದ್ದರೆ ಅದರ ದೃಡೀಕೃತ ಪ್ರತಿಯೊಂದನ್ನು ಕೊಡಿ.

ಇದಕ್ಕೆ ಉತ್ತರವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಬಂದ ಉತ್ತರ ಪ್ರತಿ ಕೆಳಗಿದೆ:

RTI_railways_3

ಜೂನ್ 2013ರಲ್ಲಿ ಮತ್ತೊಂದು RTI ಹಾಕಲಾಯಿತು. ಅದರಲ್ಲಿ ಕೇಳಲಾದ ಪ್ರಶ್ನೆಗಳು ಕೆಳಗಿವೆ.

 1. ಕರ್ನಾಟಕದಲ್ಲಿ ಓಡಾಡುವ ರೈಲ್ವೆ ಪ್ರಯಾಣಿಕರಿಂದ ರೈಲ್ವೆ ಇಲಾಖೆ 2012-13 ರಲ್ಲಿ ಪಡೆದುಕೊಂಡ ಲಾಭವೆಷ್ಟು?
 2. ರೈಲ್ವೆ ಇಲಾಖೆ 2012-13 ರಲ್ಲಿ ಕಾದಿರಸದ ಟಿಕೆಟ್ ಗಳಿಂದ ಕರ್ನಾಟಕದಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಂದ ಪಡೆದುಕೊಂಡ ಲಾಭವೆಷ್ಟು?
 3. ನಿಮ್ಮ RTI ಉತ್ತರದ ಪ್ರಕಾರ # C415/RTI/CORRESP/126/VKS/2012, ತಾಂತ್ರಿಕ ಕಾರಣಗಳಿಂದ ಕನ್ನಡದಲ್ಲಿ ಟಿಕೆಟ್ ಮುದ್ರಿಸಲು ಆಗಿಲ್ಲ ಎಂದು ಹೇಳಿದ್ದೀರಿ. ಕರ್ನಾಟಕದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡದಲ್ಲಿ  ಟಿಕೆಟ್ ಮುದ್ರಿಸುವ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಅಂದಾಜು  ವೆಚ್ಚವೆಷ್ಟು ?
 4. ಪ್ರಸ್ತುತ ಕರ್ನಾಟಕದ ರೈಲ್ವೆ ನಿಲ್ದಾಣಗಳಲ್ಲಿ ಸಿಗುವ ಕಂಪ್ಯೂಟರೀಕೃತ ರೈಲ್ವೆ ಟಿಕೆಟ್ನಲ್ಲಿ  ಕನ್ನಡ ಭಾಷೆಯಿಲ್ಲ. ಈ ಹಿಂದೆ ಎಂದಾದರು ಕಂಪ್ಯೂಟರೀಕೃತ ರೈಲ್ವೆ ಟಿಕೆಟ್  ಕನ್ನಡ ಭಾಷೆಯಲ್ಲಿ ಮುದ್ರಿತವಾಗಿತ್ತೆ ?
 5. 2012-13ನೇ ಸಾಲಿನಲ್ಲಿ ಎಷ್ಟು ಪ್ರಯಾಣಿಕರು ಕರ್ನಾಟಕದಲ್ಲಿ  ಪ್ರಯಾಣ ಮಾಡದ ರೈಲುಗಳಿಗೆ  ಕಾಯ್ದಿರಿಸದ ಟಿಕೆಟ್ ಕೊಂಡಿದ್ದಾರೆ ?
 6. 2012-13ನೇ ಸಾಲಿನಲ್ಲಿ ಎಷ್ಟು ಪ್ರಯಾಣಿಕರು ಕರ್ನಾಟಕದಲ್ಲಿ ಓಡಾಡುವ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ?
 7. 2012-13ನೇ ಸಾಲಿನಲ್ಲಿ ಎಷ್ಟು ಪ್ರಯಾಣಿಕರು ಕರ್ನಾಟಕದಿಂದ ಬೇರೆರಾಜ್ಯದ ಊರಿಗೆ  ಪ್ರಯಾಣಿಸಿದ್ದಾರೆ?

ಉತ್ತರದ ಪ್ರತಿಯನ್ನು ಈ ಕೆಳಗೆ ನೋಡಬಹುದಾಗಿದೆ.

 

 

RTI_railways_2

ನಮ್ಮ ಮೆಟ್ರೋ: ಮಾಹಿತಿ ಕೋರಿ ಆರ್.ಟಿ.ಐ(RTI) ಅರ್ಜಿ.

ಅರುಣ್ ಜಾವಗಲ್ ಎಂಬುವವರು ಅಕ್ಟೋಬರ್ 2011 ರಲ್ಲಿ ನಮ್ಮ ಮೆಟ್ರೋನಲ್ಲಿನ ಭಾಷಾ ನೀತಿಯನ್ನು ತಿಳಿಯಲು ಆರ್.ಟಿ.ಐ ಒಂದನ್ನು ಸಲ್ಲಿಸಿದ್ದರು.ಸದರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಇವರು ಕೋರಿರುವ ಮಾಹಿತಿಯ ವಿವರ ಇಂತಿದೆ.

“ನಮ್ಮ ಮೆಟ್ರೋ “ನಲ್ಲಿ ಬಳಕೆಯಾಗಿರುವ ಭಾಷಾನೀತಿಯ ಬಗೆಗಿನ ಕೆಳಗಿನ ಅಂಶಗಳ ಬಗ್ಗೆ ವಿವರಣೆಗಳು ಬೇಕಾಗಿದೆ:

೧. ಬೆಂಗಳೂರಿನ ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಯಾವ ಯಾವ ಭಾಷೆಯಲ್ಲಿ ನೀಡಬೇಕೆನ್ನುವ ಬಗ್ಗೆ ಯಾವುದಾದರೂ ನಿಯಮ “BMRCL”ನಲ್ಲಿದೆಯೇ? ಇದ್ದಲ್ಲಿ ಅದರ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ.

೨. ಪ್ರಶ್ನೆ ೧ ಕ್ಕೆ ಸಂಬಂದಪಟ್ಟಂತೆ ಗ್ರಾಹಕಸೇವಾ ನಿಯಮವನ್ನು ಜಾರಿಗೊಳಿಸಲು, ತೀರ್ಮಾನವನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ?

೩. ಭಾರತದ ಕೇಂದ್ರಸರ್ಕಾರವು ಬೆಂಗಳೂರಿನ “ನಮ್ಮ ಮೆಟ್ರೋ“ ದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇ? ಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ.

೪. ಕರ್ನಾಟಕ ರಾಜ್ಯಸರ್ಕಾರ “ನಮ್ಮ ಮೆಟ್ರೋ” ದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕ ಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇ? ಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಅಧಿಕೃತ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ.

೫. ಪ್ರಶ್ನೆ ೩ ಮತ್ತು ೪ ಕ್ಕೆ ನಿಮ್ಮ ಉತ್ತರ ಇಲ್ಲ ಎಂದಿದ್ದಲ್ಲಿ, ಇನ್ಯಾವ ಆದೇಶ/ಸೂಚನೆಯ ಮೇರೆಗೆ ಹಿಂದಿ ಬಾಷೆಯಲ್ಲಿ, ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಹಾಕಲಾಗಿದೆ? ಇದಕ್ಕೆ ಸಂಬಂಧಿಸಿದ ಆದೇಶ/ ಸೂಚನೆಯ ದಾಖಲೆಯ  ಧೃಢೀಕೃತ ಪ್ರತಿಯನ್ನು ನೀಡಿರಿ.

೬. ನಮ್ಮ ಮೆಟ್ರೋ ಸಿಬ್ಬಂದಿಗಳು ಮತ್ತು ಮೇಟ್ರೋ ನೇಮಕ ಮಾಡಿರುವ ಖಾಸಗೀ ಗುತ್ತಿಗೆ ಸಿಬ್ಬಂದಿಗಳು, ಸಾರ್ವಜನಿಕರ ಜೊತೆ ವ್ಯವಹರಿಸಬೇಕಾದಾಗ – ಸ್ಥಳೀಯ ಭಾಷೆ ಕನ್ನಡದ ಅರಿವು ಹೊಂದಿರಬೇಕೆನ್ನುವ ನಿಬಂಧನೆಯನ್ನು/ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆಯೇ? ಮಾಡಿಕೊಂಡಿದ್ದರೆ ಒಂದು ಅಧಿಕೃತ ಒಪ್ಪಂದದ ಪ್ರತಿಯ ಧೃಢೀಕೃತ ನಕಲು ಪ್ರತಿಯನ್ನು ಕೊಡಿ.

೭. ಪ್ರಶ್ನೆ ೬ ಕ್ಕೆ ಸಂಬಂದಿಸಿದಂತೆ, ನಿಬಂಧನೆ/ಒಪ್ಪಂದ ಮಾಡಿದ್ದರೆ, ಕನ್ನಡದಲ್ಲಿ ಸೇವೆಯನ್ನು ನಿರಾಕರಣೆ ಮಾಡುವ ಸಿಬ್ಬಂದಿ/ ಗುತ್ತಿಗೆದಾರರ ಮೇಲೆ ದೂರನ್ನು ಯಾರಿಗೆ ಸಲ್ಲಿಸಬೇಕು?

೮. ಕನ್ನಡದಲ್ಲಿ ಗ್ರಾಹಕ ಸೇವೆ ನೀಡದ ಬಗ್ಗೆ ದೂರು ಬಂದಲ್ಲಿ ಅಂಥವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವುದಾದರೋ ನಿಯಮವಿದೆಯೇ?

ನೀವು ಬೆಂಗಳೂರು ಮೆಟ್ರೋನಲ್ಲಿ ಬಳಸುತ್ತಿರುವ ಭಾಷೆಗಳು ಯಾವ ಸರಕಾರೀ ಆದೇಶದಂತೆ ಎಂಬ ಪ್ರಶ್ನೆಯಿತ್ತು. ಪ್ರಾಯಶಃ ಬೆಂಗಳೂರು ಮೆಟ್ರೋ ನಡೆಸುವವರ ಹತ್ತಿರ ಇದರ ಬಗ್ಗೆ ಉತ್ತರ ಇರಲಿಲ್ಲ. ಸತತ ೨ ವರ್ಷ ಹೋರಾಟದ ನಂತರ ೨೦೧೩ ಅಕ್ಟೋಬರ್ನಲ್ಲಿ ಈ ಆರ್.ಟಿ.ಐ ಅರ್ಜಿಗೆ ಉತ್ತರ ಬಂತು, ಅದೂ ಕರ್ನಾಟಕ ಮಾಹಿತಿ ಆಯೋಗ ಹಾಗು ಕರ್ನಾಟಕದ ಉಚ್ಚ ನ್ಯಾಯಾಲಯದವರೆಗೂ   ಈ ವಿಷಯವನ್ನು ತೆಗೆದು ಕೊಂಡು ಹೋದಾಗ ಮಾತ್ರ.ಬೆಂಗಳೂರು ಮೆಟ್ರೋನವರು ಕೊಟ್ಟ ಉತ್ತರಗಳ ಪ್ರತಿಯನ್ನು  ಇಲ್ಲಿ ಲಗತ್ತಿಸಿದ್ದೇವೆ
ಮೆಟ್ರೋ ನೀಡಿದ ಮೊದಲ ಉತ್ತರದ ಪ್ರತಿ ಇಂತಿದೆ.
rti_2 rti_3

ನಮ್ಮ ಮೆಟ್ರೋನ ಮೊದಲ ಉತ್ತರಗಳ ಬಗ್ಗೆ ನಾವು ಕೇಳಿದ ಸ್ಪಷ್ಠೀಕರಣಗಳಿಗೆ ಮೆಟ್ರೋದಿಂದ 13 ಏಪ್ರಿಲ್ 2013 ರಲ್ಲಿ  ಬಂದ ಉತ್ತರ.

rti_4

rti_5 rti_6 rti_7 rti_8

ನಮ್ಮ ಮೆಟ್ರೋನ ಮೊದಲ ಉತ್ತರಗಳ ಬಗ್ಗೆ ನಾವು ಕೇಳಿದ ಸ್ಪಷ್ಠೀಕರಣಗಳಿಗೆ ಮೆಟ್ರೋದಿಂದ 29 ಆಗಸ್ಟ್  2013 ರಲ್ಲಿ ಕೊಟ್ಟ ಉತ್ತರ.

rti_9 rti_10

RTI ಗೆ ಮಾಪನಶಾಸ್ತ್ರ(metrology) ಇಲಾಖೆಯಿಂದ ಬಂದ ಉತ್ತರಗಳು

ಅನ್ನದಾನೇಶ  ಸಂಕದಾಳ ಎಂಬುವವರು “ಮಾಹಿತಿ ಹಕ್ಕು ಕಾಯ್ದೆಯಡಿ – ಮಾಪನಶಾಸ್ತ್ರ ಇಲಾಖೆಗೆ ಸಂಬಂಧ ಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಆ ಇಲಾಖೆಗೆ ಅರ್ಜಿಯನ್ನು ಡಿಸೆಂಬರ್ 20 2013 ರಂದು ಸಲ್ಲಿಸಿದ್ದರು. ಅರ್ಜಿಯಲ್ಲಿ ಕೇಳಿದ ಪ್ರಶ್ನೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

 1. ಕರ್ನಾಟಕ ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಯಾವ ಭಾಷೆಯಲ್ಲಿ ಮುದ್ರಿಸಿರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ ಕಾನೂನುಗಳೇನು ?
 2. ಕರ್ನಾಟಕ ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು, ಆ ಉತ್ಪನ್ನದ ಮೇಲೆ ಅಚ್ಚು ಹಾಕಿಸಬೇಕು ಎಂಬುದನ್ನೇನಾದರೂ ಕಡ್ಡಾಯ ಮಾಡಿದೆಯೇ? ಕಡ್ಡಾಯ ಮಾಡಿದ್ದ ಪಕ್ಷದಲ್ಲಿ, ಯಾವ ಭಾಷೆಯಲ್ಲಿ ಆ ಮಾಹಿತಿ ಇರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ ಕಾನೂನುಗಳೇನು ?
 3. ಒಂದು ಪಕ್ಷ, ಪ್ರಶ್ನೆ 1 ಮತ್ತು 2 ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ, ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ ಉತ್ಪನ್ನಗಾರರು ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಯಾವ ನಿಯಮ/ಕಾನೂನಿಗೆ  ಒಳಪಟ್ಟು ಮುದ್ರಿಸಬಹುದಾಗಿದೆ?
 4. ಒಂದು ಪಕ್ಷ, ಪ್ರಶ್ನೆ 1 ಮತ್ತು 2 ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಹೆಸರನ್ನು ಮತ್ತು ಉತ್ಪನ್ನಗಳ ಮಾಹಿತಿಯನ್ನು ಮುದ್ರಿಸುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಕರ್ನಾಟಕ ರಾಜ್ಯ ಸರ್ಕಾರ ಭಾವಿಸುತ್ತದೆಯೇ?

ಇದಕ್ಕೆ ಮಾಪನಶಾಸ್ತ್ರ ಇಲಾಖೆಯಿಂದ ಬಂದ ಉತ್ತರ ಹೀಗಿದೆ.

 • ಪೊಟ್ಟಣ ಸಾಮಗ್ರಿ ಉತ್ಪನ್ನಗಳ ಮೇಲೆ ಯಾವ ಭಾಷೆಯಲ್ಲಿ ಮುದ್ರಿಸಬೇಕು ಎಂಬುದರ ಬಗ್ಗೆ ದಿ ಲೀಗಲ್ ಮೆಟ್ರೊಲಜಿ (ಪೊಟ್ಟಣ ಸಾಮಗ್ರಿ ) ನಿಯಮಗಳ 2011ರ  ನಿಯಮ 9 (4) (b) ರ ಪ್ರಕಾರ ಮುದ್ರಿಸಬೇಕಾಗುತ್ತದೆ. ಸದರಿ ನಿಯಮಗಳ ಇಲಾಖೆಯ ವೆಬ್ಸೈಟ್ http://legalmetrology.kar.nic.in ನಲ್ಲಿ ಲಭ್ಯವಿರುತ್ತದೆ.
 • ಪೊಟ್ಟಣ ಸಾಮಗ್ರಿ ಉತ್ಪನ್ನಗಳ ಮೇಲೆ ( ಈ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮಾಹಿತಿಗಳು ಮಾತ್ರ) ಯಾವ ಮಾಹಿತಿಗಳನ್ನು ಮುದ್ರಿಸಬೇಕು ಎಂಬುದರ ಬಗ್ಗೆ ಮಾಹಿತಿಯು ದಿ ಲೀಗಲ್ ಮೆಟ್ರೊಲಜಿ (ಪೊಟ್ಟಣ ಸಾಮಗ್ರಿ ) ನಿಯಮಗಳ 2011ರ  ನಿಯಮ 6ರ ಪ್ರಕಾರ ಮುದ್ರಿಸಬೇಕಾಗುತ್ತದೆ. ಸದರಿ ನಿಯಮಗಳು ಇಲಾಖೆಯ ವೆಬ್ಸೈಟ್ http://legalmetrology.kar.nic.in ನಲ್ಲಿ ಲಭ್ಯವಿರುತ್ತದೆ.
 • ಅನ್ವಯಿಸುವುದಿಲ್ಲ
 • ಅನ್ವಯಿಸುವುದಿಲ್ಲ

ಉತ್ತರದ ಪ್ರತಿಯನ್ನು ನೀವು ಕೆಳಗೆ ನೋಡಬಹುದು.

 

PackageRTI_2

ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ

ಜನವರಿ 24, 2016 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ “ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ – ಒಂದು ಚಿತ್ರಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಚಿತ್ರಪ್ರದರ್ಶನಕ್ಕೆ ಹಲವಾರು ಜನರು ಭೇಟಿ ಕೊಟ್ಟು, ಸಮಾನತೆಯ ಭಾಷಾನೀತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು. ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಣಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ

ಭಾರತ ಒಕ್ಕೂಟದಲ್ಲಿ ಸಮಾನ ಭಾಷಾನೀತಿಯ ಅಗತ್ಯತೆಯನ್ನು ಬಣ್ಣಿಸುವ ಚಿತ್ರಪ್ರದರ್ಶನವೊಂದನ್ನು ಬನವಾಸಿ ಬಳಗವು 2016ರ ಜನವರಿ 24, ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 3.30ರವರೆಗೆ ನಡೆದ ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

pic7pic4pic6 pic5 pic8 pic1  pic3pic9

RTI ಗೆ ಕೆನರಾ(Canara) ಬ್ಯಾಂಕ್‍ನಿಂದ ಬಂದ ಉತ್ತರಗಳು

 

ಪ್ರಶಾಂತ್ ಸೊರಟೂರ ಎಂಬುವವರು 2013 ರಲ್ಲಿ ಕೆನರಾ ಬ್ಯಾಂಕ್ ಶಾಖೆಗಳ ನಿಯಮಗಳು ಮತ್ತು ಭಾಷಾ ನೀತಿ ಕುರಿತು ಮಾಹಿತಿಯನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಒಂದು ಅರ್ಜಿ ಹಾಕಿದ್ದರು. ಅದರ ಸಾರಾಂಶ ಹೀಗಿದೆ.

ಮಾನ್ಯರೇ,

ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕರ್ನಾಟಕದಲ್ಲಿರುವ ಕೆನರಾ (Canara) ಬ್ಯಾಂಕ್ ಶಾಖೆಗಳ ಕುರಿತು ಈ ಕೆಳಗಿನ ಮಾಹಿತಿಗಳನ್ನು ಕೋರುತ್ತಿರುವೆ.

1) ಕರ್ನಾಟಕದ ನಿಮ್ಮ ಬ್ಯಾಂಕ್ ಶಾಖೆಗಳಲ್ಲಿ ಈ ಕೆಳಗಿನ ಅರ್ಜಿ ಇಲ್ಲವೇ ನಮೂನೆಗಳು ಕನ್ನಡದಲ್ಲಿ ಇವೆಯೇ?

 • ಎಲ್ಲ ಬಗೆಯ ಹೊಸ ಖಾತೆ ತೆರೆಯುವ ಅರ್ಜಿ (ಉಳಿತಾಯ, ಚಾಲ್ತಿ ಇತ್ಯಾದಿ)
 • ಮನೆ ಸಾಲ ಪಡೆಯುವ ಅರ್ಜಿ
 • ವಾಹನ ಸಾಲ ಪಡೆಯುವ ಅರ್ಜಿ
 • ಶಿಕ್ಷಣ ಸಾಲ ಪಡೆಯುವ ಅರ್ಜಿ
 • ನಾಮ ನಿರ್ದೇಶನದ ಅರ್ಜಿ
 • ನಿಶ್ಚಿತ ಠೇವಣಿ ಅರ್ಜಿ ಮತ್ತು ಠೇವಣಿ ಇಟ್ಟ ಬಗ್ಗೆ ಬ್ಯಾಂಕ್ ಕೊಡುವ ಒಪ್ಪಿಗೆಯೋಲೆ (Term Deposit Advice)
 • ಹಣ ಪಡೆಯುವ ಮತ್ತು ತುಂಬುವ ಚೀಟಿ
 • ಇನ್ನೊಂದು ಬ್ಯಾಂಕ್ ಖಾತೆ ವರ್ಗಾವಣೆ ಅರ್ಜಿ
 • ಚೆಕ್
 • ಮನೆ ವಿಳಾಸ ಬದಲಿಸುವ ಅರ್ಜಿ
 • ಡಿಮ್ಯಾಂಡ್ ಡ್ರಾಫ್ಟ್
 • ಎ.ಟಿ.ಎಂ ಕಾರ್ಡ್ ಪಡೆಯುವ ಅರ್ಜಿ

2) ಮೇಲೆ 1) ರಲ್ಲಿ ಕೇಳಿದ ಮಾಹಿತಿಗೆ ಯಾವುದೆಲ್ಲ ಅರ್ಜಿ ನಮೂನೆಗಳಿಗೆ ನಿಮ್ಮ ಉತ್ತರ “ಇಲ್ಲ” (ಅಂದರೆ ಕನ್ನಡ ಬಳಕೆಯಾಗುತ್ತಿಲ್ಲ) ಅನ್ನುವುದಾಗಿದೆಯೋ ಅಂತಲ್ಲಿ ಕನ್ನಡ ಬಳಸಲು ಇಲ್ಲವೇ ಕನ್ನಡ ಬಳಸದಿರುವುದಕ್ಕೆ ವಿನಾಯಿತಿಯನ್ನು (Exemption) ನಿಮ್ಮ ಬ್ಯಾಂಕ್ ನ ಆಡಳಿತ ಮಂಡಳಿ ಇಲ್ಲವೇ ಭಾರತೀಯ ರಿಸರ್ವ್ ಬ್ಯಾಂಕು ಹೊರಡಿಸಿದ ಆದೇಶಗಳು, ಸುತ್ತೋಲೆಗಳು ಇಲ್ಲವೇ RTI Act, 2005 ರಲ್ಲಿ ತಿಳಿಸಿರುವಂತೆ ಇನ್ನಾವುದೇ ಸಾಮಗ್ರಿ ರೂಪದಲ್ಲಿರುವಂತಹ (material form), ತೀರ್ಮಾನಗಳ ಅಡಿಯಲ್ಲಿ ಹೀಗೆ ಮಾಡುತ್ತಿದ್ದರೆ (ಕನ್ನಡ ಬಳಸದಿರುವಿಕೆ) ಅಂತಹ ಆದೇಶಗಳು, ಸುತ್ತೋಲೆಗಳು ಇತ್ಯಾದಿಗಳ ಪ್ರತಿಯೊಂದನ್ನು ದಯವಿಟ್ಟು ಕಳಿಸಿಕೊಡಿ.

3) ಕರ್ನಾಟಕದಲ್ಲಿರುವ ಗ್ರಾಹಕರೊಡನೆ ನಿಮ್ಮ ಬ್ಯಾಂಕು ಅನುಸರಿಸುವ ಭಾಷಾ ನೀತಿಗೆ (Language Policy) ಹೊಂದಿಕೊಂಡ ಆದೇಶಗಳು, ಸುತ್ತೋಲೆಗಳು ಇಲ್ಲವೇ RTI Act, 2005 ರಲ್ಲಿ ತಿಳಿಸಿರುವಂತೆ ಇನ್ನಾವುದೇ ಸಾಮಗ್ರಿ ರೂಪದಲ್ಲಿ ಇದ್ದರೆ ಅವುಗಳ ಪ್ರತಿಯೊಂದನ್ನು ದಯವಿಟ್ಟು ಕಳಿಸಿಕೊಡಿ. (ಕರ್ನಾಟಕದ ನಿಮ್ಮ ಬ್ಯಾಂಕುಗಳಲ್ಲಿ ಯಾವ, ಯಾವ ಭಾಷೆಗಳನ್ನು ಬಳಸಬೇಕು ಅನ್ನುವಂತ ಸಾಮಗ್ರಿ ರೂಪದಲ್ಲಿರುವ ಮಾಹಿತಿಗಳು)

4) ಕೆನರಾ ಬ್ಯಾಂಕಿನ ಕರ್ನಾಟಕದಲ್ಲಿರುವ ಶಾಖೆಗಳು ಎಷ್ಟು ಮತ್ತು ಕರ್ನಾಟಕದ ಹೊರಗಡೆ ಇರುವ ಶಾಖೆಗಳು ಎಷ್ಟು ಎನ್ನುವ ಮಾಹಿತಿಯನ್ನು ದಯವಿಟ್ಟು ತಿಳಿಸಿ.

ಇದಕ್ಕೆ ಕೆನರಾ ಬ್ಯಾಂಕ್‍ನಿಂದ ಬಂದ ಉತ್ತರ ಹೀಗಿದೆ.

1) RTI act 2005 sec 2(f) ಪ್ರಕಾರ ಇದು ಪ್ರಶ್ನಾರ್ಥಕ ರೂಪದಲ್ಲಿರುವುದರಿಂದ ಇದರ ಬಗ್ಗೆ ಮಾಹಿತಿ ನೀಡಲು ಸಾದ್ಯವಿಲ್ಲ.

2) ನಾವು ಗಮನಿಸಿರುವ ಪ್ರಕಾರ, ನೀವು ಕೇಳುತ್ತಿರುವ ಸ್ಪಷ್ಟನೆ ಮಾಹಿತಿಯಾಗಿಲ್ಲದಿರುವುದರಿಂದ ಅದಕ್ಕೆ ಉತ್ತರಿಸಲು RTI act 2005 sec 2(f) ಪ್ರಕಾರ ಸಾಧ್ಯವಿಲ್ಲ.

3) ನಮ್ಮದು ಸಾರ್ವಜನಿಕ ವಲಯದಬ್ಯಾಂಕ್ ಆಗಿರುವುದರಿಂದ ಕೇಂದ್ರ ಸರ್ಕಾರ ಮತ್ತು ಅರ್.ಬಿ.ಐ(RBI) ರೂಪಿಸಿರುವ ಭಾಷಾ ನೀತಿಯನ್ನು ಪಾಲಿಸುತ್ತಿದ್ದೇವೆ. ಹಾಗಾಗಿ ನಮ್ಮ ಬ್ಯಾಂಕಿನ ಎಲ್ಲ ಶಾಖೆಗಳಲ್ಲೂ ಎಲ್ಲ ನಾಮಫಲಕಗಳೂ ತ್ರಿಭಾಷಾ ಸೂತ್ರ ಅನ್ವಯದಂತೆ ಹಿಂದಿ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಇರುತ್ತವೆ, ಮತ್ತು ಎಲ್ಲ ತರಹದ ಅರ್ಜಿಗಳನ್ನು ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಮುದ್ರಿಸಲಾಗಿದೆ. ಪ್ರಾದೇಶಿಕ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಕೆಲವು ಅರ್ಜಿಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಅಚ್ಚುಹಾಕಲಾಗಿದೆ. ಉದಾಹರಣೆಗೆ, ಹಣ ತುಂಬುವ ಚೀಟಿಗಳನ್ನು ಆಯಾ ಪ್ರದೇಶಕ್ಕೆ ತಕ್ಕಂತೆ ಎರಡು ಅಥವಾ ಮೂರು ಭಾಷೆಗಳಲ್ಲಿ ಅಚ್ಚು ಹಾಕಿಸಲಾಗಿದೆ.

4) ಕರ್ನಾಟಕದಲ್ಲಿ ನಮ್ಮ ಶಾಖೆಗಳು: 701

ಹೊರರಾಜ್ಯದಲ್ಲಿನ ನಮ್ಮ ಶಾಖೆಗಳು(ಕರ್ನಾಟಕದ ಹೊರಗಡೆ): 2981

ಉತ್ತರದ ಪ್ರತಿಯನ್ನು ಈ ಕೆಳಗೆ ನೋಡಬಹುದಾಗಿದೆ

canara_answer

RTI ಗೆ ಎಸ್.ಬಿ.ಐ (SBI) ಬ್ಯಾಂಕ್ ನಿಂದ ಬಂದ ಉತ್ತರಗಳು

ಪ್ರಶಾಂತ್ ಸೊರಟೂರ ಎಂಬುವವರು 2012 ರಲ್ಲಿ ಎಸ್.ಬಿ. ಐ (SBI) ಬ್ಯಾಂಕ್ ಶಾಖೆಗಳಲ್ಲಿ ಕನ್ನಡ ಭಾಷೆ ಬಳಕೆಯ ಮಾಹಿತಿಯನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಒಂದು ಅರ್ಜಿ ಹಾಕಿದ್ದರು. ಅದರ ಸಾರಾಂಶ ಹೀಗಿದೆ.

ಮಾನ್ಯರೇ,
ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕರ್ನಾಟಕದಲ್ಲಿರುವ ಎಸ್.ಬಿ. ಐ (SBI) ಬ್ಯಾಂಕ್ ಶಾಖೆಗಳ ಕುರಿತು ಈ ಕೆಳಗಿನ ಮಾಹಿತಿಗಳನ್ನು ಕೋರುತ್ತಿರುವೆ.

 1. ಕರ್ನಾಟಕದಲ್ಲಿರುವ ನಿಮ್ಮ ಬ್ಯಾಂಕ್ ಗಳಲ್ಲಿ ವ್ಯವಹರಿಸಲು ಗ್ರಾಹಕರಿಗೆ ಇಂತದೇ ಭಾಷೆ ಇಲ್ಲವೇ ಭಾಷೆಗಳು ತಿಳಿದಿರಲೇಬೇಕು ಅಂತಾ ಯಾವುದಾದರು ನಿಯಮಗಳು ಇವೆಯೇ ?
 2. ಕರ್ನಾಟಕದ ನಿಮ್ಮ ಬ್ಯಾಂಕ್ ಶಾಖೆಗಳಲ್ಲಿ ಈ ಕೆಳಗಿನ ಅರ್ಜಿ ಇಲ್ಲವೇ ನಮೂನೆಗಳು ಕನ್ನಡದಲ್ಲಿ ಇವೆಯೇ ?
  i) ಎಲ್ಲ ಬಗೆಯ ಹೊಸ ಖಾತೆ ತೆರೆಯುವ ಅರ್ಜಿ (ಉಳಿತಾಯ, ಚಾಲ್ತಿ ಇತ್ಯಾದಿ )
  ii) ಮನೆ ಸಾಲ ಪಡೆಯುವ ಅರ್ಜಿ
  iii) ವಾಹನ ಸಾಲ ಪಡೆಯುವ ಅರ್ಜಿ
  iv) ಶಿಕ್ಷಣ ಸಾಲ ಪಡೆಯುವ ಅರ್ಜಿ
  v) ನಾಮ ನಿರ್ದೇಶನದ ಅರ್ಜಿ
  vi) ನಿಶ್ಚಿತ ಠೇವಣಿ ಅರ್ಜಿ ಮತ್ತು ಠೇವಣಿ ಇಟ್ಟ ಬಗ್ಗೆ ಬ್ಯಾಂಕ್ ಕೊಡುವ ಒಪ್ಪಿಗೆಯೋಲೆ(Term Deposit Advice)
  vii) ಹಣ ಪಡೆಯುವ ಮತ್ತು ತುಂಬುವ ಚೀಟಿ
  viii) ಇನ್ನೊಂದು ಬ್ಯಾಂಕ್ ಖಾತೆ ವರ್ಗಾವಣೆ ಅರ್ಜಿ
  ix) ಚೆಕ್
  x) ಮನೆ ವಿಳಾಸ ಬದಲಿಸುವ ಅರ್ಜಿ
  xi) ಡಿಮ್ಯಾಂಡ್ ಡ್ರಾಫ್ಟ್
  xii) ಏ.ಟಿಎಂ ಕಾರ್ಡ್ ಪಡೆಯುವ ಅರ್ಜಿ.
 3. ಮೇಲೆ 2) ರಲ್ಲಿ ಕೇಳಿದ ಮಾಹಿತಿಗೆ ಯಾವುದೆಲ್ಲ ಅರ್ಜಿ ನಮೂನೆಗಳಿಗೆ ನಿಮ್ಮ ಉತ್ತರ “ಇಲ್ಲ”(ಅಂದರೆ ಕನ್ನಡ ಬಳಕೆಯಾಗುತ್ತಿಲ್ಲ) ಅನ್ನುವುದಾಗಿದೆಯೋ ಅಂತಲ್ಲಿ ಕನ್ನಡವಷ್ಟೇ ಬಲ್ಲವರು ಇಲ್ಲವೇ ಆ ಅರ್ಜಿಗಳಲ್ಲಿರುವ ಭಾಷೆ, ಭಾಷೆಗಳಿಗಿಂತ ಕನ್ನಡ ಚೆನ್ನಾಗಿ ಬಲ್ಲವರು ನಿಮ್ಮ ಬ್ಯಾಂಕಿನ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ನಿಮ್ಮಲ್ಲಿ ಯಾವುದಾದರು ವ್ಯವಸ್ಥೆಗಳು ಇವೆಯೇ? ಇದ್ದರೆ ಅವು ಯಾವುವು ?
 4. ಮೇಲೆ, 2) ರಲ್ಲಿ ಕೇಳಿದ ಮಾಹಿತಿಗೆ ಯಾವುದೆಲ್ಲ ಅರ್ಜಿ ನಮೂನೆಗಳಿಗೆ ನಿಮ್ಮ ಉತ್ತರ “ಇಲ್ಲ” (ಅಂದರೆ ಕನ್ನಡ ಬಳಕೆಯಾಗುತ್ತಿಲ್ಲ) ಅನ್ನುವುದಾಗಿದೆಯೋ ಅಂತಲ್ಲಿ ಕನ್ನಡ ಬಳಸಬಾರದು ಇಲ್ಲವೇ ಇಂತದೇ ಭಾಷೆಗಳನ್ನು ಬಳಸಬೇಕು ಅನ್ನುವ ನಿಯಮಗಳೇನಾದರು ಇವೆಯೇ? ಇದ್ದರೆ ಅವು ಯಾವುವು ?
 5. ಕರ್ನಾಟಕದಲ್ಲಿರುವ ನಿಮ್ಮ ಗ್ರಾಹಕರೊಡನೆ ಪತ್ರ ವ್ಯವಹಾರ ಮಾಡಬೇಕಾದಾಗ ಯಾವ ಭಾಷೆ ಇಲ್ಲವೇ ಭಾಷೆಗಳನ್ನು ನೀವು ಬಳಸುತ್ತೀರಿ ?
 6. ಮೇಲೆ, 5) ಕ್ಕೆ ನಿಮ್ಮ ಉತ್ತರದಲ್ಲಿ ಕನ್ನಡ ಇಲ್ಲಾ ಅಂದರೆ, ಕನ್ನಡವಷ್ಟೇ ಬಲ್ಲವರು ಇಲ್ಲವೇ ಆ ಪತ್ರಗಳಲ್ಲಿರುವ ಭಾಷೆ ಇಲ್ಲವೇ ಭಾಷೆಗಳಿಗಿಂತ, ಕನ್ನಡ ಚೆನ್ನಾಗಿ ಬಲ್ಲವರು ಬ್ಯಾಂಕಿನ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ನಿಮ್ಮಲ್ಲಿ ಯಾವುದಾದರು ವ್ಯವಸ್ಥೆಗಳು ಇವೆಯೇ ? ಇದ್ದರೆ ಅವು ಯಾವುವು ?
 7. ಮೇಲೆ, 5) ಕ್ಕೆ ನಿಮ್ಮ ಉತ್ತರದಲ್ಲಿ ಕನ್ನಡ ಇಲ್ಲಾ ಅಂದರೆ ಪತ್ರ ವ್ಯವಹಾರಕ್ಕಾಗಿ ಕನ್ನಡ ಬಳಸಬಾರದು ಇಲ್ಲವೇ ಇಂತದೇ ಭಾಷೆಗಳನ್ನೇ ಬಳಸಬೇಕು ಅನ್ನುವ ನಿಯಮಗಳೇನಾದರು ಇವೆಯೇ ? ಇದ್ದರೆ ಅವು ಯಾವುವು?
 8. ಕರ್ನಾಟಕದಲ್ಲಿರುವ ನಿಮ್ಮ ಎಲ್ಲ ಎ.ಟಿ.ಎಂ ಗಳಲ್ಲಿ ಕನ್ನಡ ಆಯ್ಕೆ ಇದೆಯೇ ?

ಇದಕ್ಕೆ ಎಸ್.ಬಿ. ಐ ನಿಂದ ಬಂದ ಉತ್ತರ ಹೀಗಿದೆ.

 1. RTI Act 2005 sec 2 (f) ಪ್ರಕಾರ ವಸ್ತು ರೀತಿಯಲ್ಲಿರುವ ಮಾಹಿತಿಯನ್ನು ಮಾತ್ರ ನೀವು ಕೇಳಬಹುದು.
  ಇದು ಪ್ರಶ್ನಾರ್ಥಕ ರೂಪದಲ್ಲಿರುವುದರಿಂದ ಇದರ ಬಗ್ಗೆ ಮಾಹಿತಿ ನೀಡಲು ಸಾದ್ಯವಿಲ್ಲ.
 2. (i) ಅರ್ಜಿಗಳು ಕನ್ನಡದಲ್ಲಿವೆ
  (ii) – (iv) ಅರ್ಜಿಗಳು ಕನ್ನಡದಲ್ಲಿ ಲಭ್ಯವಿಲ್ಲ
  (v) ಮತ್ತು (vi) ಅರ್ಜಿಗಳು ಕನ್ನಡದಲ್ಲಿವೆ
  (vii) ಹಣ ಪಡೆಯುವ ಮತ್ತು ತುಂಬುವ ಚೀಟಿ ತ್ರಿಭಾಷೆಯಲ್ಲಿ ಲಭ್ಯವಿದೆ (ಇಂಗ್ಲಿಷ್, ಹಿಂದಿ ಮತ್ತು ಕನ್ನಡ)
  (viii) ಅರ್ಜಿಗಳು ಕನ್ನಡದಲ್ಲಿ ಲಭ್ಯವಿಲ್ಲ
  (ix) ಮತ್ತು (x) ಅರ್ಜಿಗಳು ಕನ್ನಡದಲ್ಲಿ ಲಭ್ಯವಿಲ್ಲ
  (xi) ಡಿಮ್ಯಾಂಡ್ ಡ್ರಾಫ್ಟ್ ಗಳು ಇಂಗ್ಲಿಷ್ ನಲ್ಲಿ ಮಾತ್ರ ಲಭ್ಯವಿದೆ
  (xii) ಅರ್ಜಿಗಳು ಕನ್ನಡದಲ್ಲಿವೆ
 3. (3)-(8) RTI Act 2005 sec 2 (f) ಪ್ರಕಾರ ವಸ್ತು ರೀತಿಯಲ್ಲಿರುವ ಮಾಹಿತಿಯನ್ನು ಮಾತ್ರ ನೀವು ಕೇಳಬಹುದು.ಇದು ಪ್ರಶ್ನಾರ್ಥಕ ರೂಪದಲ್ಲಿರುವುದರಿಂದ ಇದರ ಬಗ್ಗೆ ಮಾಹಿತಿ ನೀಡಲು ಸಾದ್ಯವಿಲ್ಲ.

ಉತ್ತರದ ಪ್ರತಿಯನ್ನು ನೀವು ಕೆಳಗೆ ನೋಡಬಹುದು.

 

SBI_RTI_13_10_2012_Feedback

 

ಇದಕ್ಕೆ ಪ್ರತ್ಯುತ್ತರವಾಗಿ 2013 ರಲ್ಲಿ ಮತ್ತೊಂದು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಅರ್ಜಿ ಹಾಕಲಾಯಿತು. ಅದರ ಸಾರಾಂಶ ಹೀಗಿದೆ.
ಮಾನ್ಯರೇ,
ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ, ಕರ್ನಾಟಕದಲ್ಲಿರುವ ತಮ್ಮ ಬ್ಯಾಂಕ್ ಶಾಖೆಗಳ ಕುರಿತು ಈ ಕೆಳಗಿನ ಮಾಹಿತಿಗಳನ್ನು ಕೋರುತ್ತಿರುವೆ.

 1. ನನ್ನ ಹಿಂದಿನ ಮಾಹಿತಿ ಹಕ್ಕು ಅರ್ಜಿಗೆ (ದಿ.10.2012, RTI/94/2012-13/99, ಅದರ ಪ್ರತಿ ಅಂಟಿಸಿದೆ) ಬಂದ ತಮ್ಮ ಉತ್ತರದಲ್ಲಿ ಕೆಳಗಿನ ಅರ್ಜಿ ನಮೂನೆಗಳು ಕನ್ನಡದಲ್ಲಿ ಇಲ್ಲ ಅನ್ನಲಾಗಿದೆ.
  i. ಮನೆ ಸಾಲ ಪಡೆಯುವ ಅರ್ಜಿ
  ii. ವಾಹನ ಸಾಲ ಪಡೆಯುವ ಅರ್ಜಿ
  iii. ಶಿಕ್ಷಣ ಸಾಲ ಪಡೆಯುವ ಅರ್ಜಿ
  iv. ನಾಮ ನಿರ್ದೇಶನದ ಅರ್ಜಿ
  v. ಇನ್ನೊಂದು ಬ್ಯಾಂಕಿಗೆ ಖಾತೆ ವರ್ಗಾವಣೆಯ ಅರ್ಜಿ
  vi. ಚೆಕ್
  vii. ಮನೆ ವಿಳಾಸ ಬದಲಾವಣೆ ತಿಳಿಸುವ ಅರ್ಜಿ

ಮೇಲಿನ ಅರ್ಜಿ ನಮೂನೆಗಳಲ್ಲಿ ಕನ್ನಡ ಬಳಸದಿರಲು ನಿಮ್ಮ ಬ್ಯಾಂಕಿನ ಆಡಳಿತ ಮಂಡಳಿಯಾಗಲೀ ಇಲ್ಲವೇ ಭಾರತೀಯ ರಿಜರ್ವ್ ಬ್ಯಾಂಕ ಆಗಲೀ      ಸುತ್ತೋಲೆಗಳು, ಆದೇಶಗಳು ಇಲ್ಲವೇ RTI Act, 2005 Section 2 (f) ನಲ್ಲಿ ತಿಳಿಸಿದಂತ ಇನ್ನಾವುದೇ ಸಾಮಗ್ರಿ ರೂಪದಲ್ಲಿರುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆಯೇ? ಹಾಗೆ ತಿರ್ಮಾನಗಳನ್ನು ತೆಗೆದುಕೊಂಡಿದ್ದರೆ ಆ ಸುತ್ತೋಲೆ, ಆದೇಶ ಇತ್ಯಾದಿಗಳ ಪ್ರತಿಯೊಂದನ್ನು ದಯವಿಟ್ಟು ಕಳಿಸಿಕೊಡಿ.

 1. ಅರ್ಜಿ ನಮೂನೆಗಳು ಮತ್ತು ಗ್ರಾಹಕರೊಡನೆ ವ್ಯವಹರಿಸುವಾಗ ಕನ್ನಡ ಬಳಸದಿರುವ ವಿನಾಯತಿ (Exemption) ಸುತ್ತೋಲೆ, ಆದೇಶಗಳು ಇಲ್ಲವೇ RTI Act, 2005 Section 2 (f) ನಲ್ಲಿ ತಿಳಿಸಿದಂತ ಇನ್ನಾವುದೇ ಸಾಮಗ್ರಿ ರೂಪದಲ್ಲಿ ನಿಮ್ಮ ಬ್ಯಾಂಕಿಗೆ ದೊರೆತಿದೆಯೇ? ಹೌದು, ದೊರೆತಿದೆ ಎಂದಾದರೆ ದಯವಿಟ್ಟು ಅವುಗಳ ಪ್ರತಿಯೊಂದನ್ನು ಕಳಿಸಿಕೊಡಿ.
 2. ಕರ್ನಾಟಕದಲ್ಲಿರುವ ಗ್ರಾಹಕರೊಡನೆ ವ್ಯವಹರಿಸಲು ನಿಮ್ಮ ಬ್ಯಾಂಕು ಅನುಸರಿಸುವ ಭಾಷಾ ನೀತಿಗೆ (Language Policy) ಹೊಂದಿಕೊಂಡ ಆದೇಶಗಳು, ಸುತ್ತೋಲೆಗಳು ಇಲ್ಲವೇ RTI Act, 2005 Section 2 (f) ನಲ್ಲಿ ತಿಳಿಸಿದಂತ ಇನ್ನಾವುದೇ ಸಾಮಗ್ರಿ ರೂಪದಲ್ಲಿ ಇದ್ದರೆ ದಯವಿಟ್ಟು ಪ್ರತಿಯೊಂದನ್ನು ಕಳಿಸಿಕೊಡಿ. (ಕರ್ನಾಟಕದ ನಿಮ್ಮ ಬ್ಯಾಂಕುಗಳಲ್ಲಿ ಯಾವ, ಯಾವ ಭಾಷೆಗಳನ್ನು ಬಳಸಬೇಕು ಅನ್ನುವಂತ ಸಾಮಗ್ರಿ ರೂಪದಲ್ಲಿರುವ ಮಾಹಿತಿಗಳು)

ಎರಡನೇ ಬಾರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಎಸ್.ಬಿ.ಐ. ಬ್ಯಾಂಕಿನಿಂದ ಬಂದ ಉತ್ತರ ಹೀಗಿದೆ.

 1. ಕ್ರಮಾಂಕ (iv) ನ್ನು ಹೊರತುಪಡಿಸಿ, ಇಲ್ಲಿ ನಮೂದಿಸಿದ ಯಾವ ಅರ್ಜಿ ನಮೂನೆಗಳ ಕನ್ನಡ ಅನುವಾದವನ್ನು ಬಳಸಬಾರದೆಂದು ಭಾರತೀಯ ಸ್ಟೇಟ್ ಬ್ಯಾಂಕಿನ/ ಭಾರತೀಯ ರೆಸೆರ್ವೆ ಬ್ಯಾಂಕಿನ ಯಾವ ನಿರ್ದೆಶನವೂ / ಆದೇಶವು ಇಲ್ಲ.
 2. ನಮ್ಮ ಗ್ರಾಹಕರೊಡನೆ ವ್ಯವಹರಿಸುವಾಗ, ಕನ್ನಡ ಭಾಷೆ ಬಳಕೆಯ ವಿನಾಯತಿ ಬಗ್ಗೆ ಬ್ಯಾಂಕಿನ ಯಾವುದೇ ನಿರ್ದೆಶನವೂ / ಆದೇಶವು ಇಲ್ಲ.
 3. ಭಾರತೀಯ ಸಂವಿಧಾನದಲ್ಲಿರುವಂತೆ (17 ನೆ ಚಾಪ್ಟರ್ ಭಾಷೆಗಳು) ಭಾರತ ಒಕ್ಕೂಟದ ಅಧಿಕೃತ ಭಾಷೆಗಳ ನೀತಿಯನ್ನು ಪಾಲಿಸುತ್ತದೆ.

ಉತ್ತರದ ಪ್ರತಿಯನ್ನು ನೀವು ಕೆಳಗೆ ನೋಡಬಹುದು.

 

SBI_20001

ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ

ಸೆಪ್ಟೆಂಬರ್ 13, 2015 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ “ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ – ಒಂದು ಚಿತ್ರಪ್ರದರ್ಶನ”ದ ವಿಡಿಯೋ ಇಲ್ಲಿದೆ. ಬನವಾಸಿ ಬಳಗ ಪ್ರಕಾಶನವು ಹೊರತಂದಿರುವ “ಹಿಂದೀ ಹೇರಿಕೆ – ಮೂರು ಮಂತ್ರ, ನೂರು ತಂತ್ರ” ಹೊತ್ತಗೆಯ ಬರಹಗಾರರಾದ ಶ್ರೀ ಆನಂದ್ ಅವರು ಚಿತ್ರಪ್ರದರ್ಶನವನ್ನು ಬಣ್ಣಿಸಿದ್ದಾರೆ.

ಚಿತ್ರಪ್ರದರ್ಶನಕ್ಕೆ ಹಲವಾರು ಜನರು ಭೇಟಿ ಕೊಟ್ಟು, ಸಮಾನತೆಯ ಭಾಷಾನೀತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು. ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಣಗಳನ್ನು ಈ ಕೆಳಗಿನ ವಿಡಿಯೋಗಳಲ್ಲಿ  ನೋಡಬಹುದಾಗಿದೆ.

ಸಮಾನತೆಯ ಭಾಷಾನೀತಿ ಚಿತ್ರಪ್ರದರ್ಶನದ ಆಯ್ದ ಚಿತ್ರಣಗಳು – ತುಣುಕು 1

ಸಮಾನತೆಯ ಭಾಷಾನೀತಿ ಚಿತ್ರಪ್ರದರ್ಶನದ ಆಯ್ದ ಚಿತ್ರಣಗಳು – ತುಣುಕು 2

“ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ” ಒಂದು ಚಿತ್ರಪ್ರದರ್ಶನ

ಭಾರತ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಗುರುತಿಸಲಾಗಿರುವ ಎಲ್ಲ 22 ಭಾಷೆಗಳನ್ನೂ ಒಕ್ಕೂಟ ಸರಕಾರದ ಅಧಿಕೃತ ಭಾಷೆಗಳನ್ನಾಗಿಸಬೇಕು ಅನ್ನುವ ಮತ್ತು ಸಮಾನ ಭಾಷಾನೀತಿಗಾಗಿ ಒತ್ತಾಯಿಸುವ ಬಗ್ಗೆ ಬನವಾಸಿ ಬಳಗವು, 2015ರ ಸೆಪ್ಟೆಂಬರ್ 13 ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನವೊಂದನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಚಿತ್ರಪ್ರದರ್ಶನದ ಕುರಿತು ಪತ್ರಿಕೆಗಳಲ್ಲಿ ಮೂಡಿಬಂದ ವರದಿಗಳನ್ನು ಈ ಕೆಳಗೆ ಕಾಣಬಹುದು.

ಸಮಾನತೆಯ ಭಾಷಾ ನೀತಿಗೆ ಟೊಂಕಕಟ್ಟಿದ ಬನವಾಸಿ ಬಳಗ : ಸಂಯುಕ್ತ ಕರ್ನಾಟಕ, 14/09/2015

Samyukta Karnataka - 14-09-2015

ಸಮಾನತೆಯ ಭಾಷಾ ನೀತಿಗೆ ಆಗ್ರಹ  : ಉದಯವಾಣಿ,  14/09/2015

Udayavani-14-09-2015

ಭಾಷಾಭಿವೃದ್ಧಿಗೆ ಕ್ರಿಯಾ ಯೋಜನೆ ಬರಲಿ  : ವಿಜಯ ಕರ್ನಾಟಕ, 14/09/2015

Vijaya Karnataka 14-09-2015.

ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ

ಭಾರತ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಗುರುತಿಸಲಾಗಿರುವ ಎಲ್ಲ 22 ಭಾಷೆಗಳನ್ನೂ ಒಕ್ಕೂಟ ಸರಕಾರದ ಅಧಿಕೃತ ಭಾಷೆಗಳನ್ನಾಗಿಸಬೇಕು ಅನ್ನುವ, ಸಮಾನ ಭಾಷಾನೀತಿಗಾಗಿ ಒತ್ತಾಯಿಸುವ ಬಗ್ಗೆ ಬನವಾಸಿ ಬಳಗವು, 2015ರ ಸೆಪ್ಟೆಂಬರ್ 13 ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನವೊಂದನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

42 63 73 13 23 33