FAQs

೧. ನಮ್ಮ ದೇಶದ ರಾಷ್ಟ್ರಭಾಷೆ ಹಿಂದಿಯಲ್ವಾ?
ಅಲ್ಲ, ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ. ಭಾರತದ ಸಂವಿಧಾನ ಯಾವುದೇ ಭಾಷೆಯನ್ನು ಭಾರತದ ರಾಷ್ಟ್ರಭಾಷೆ ಎಂದು ಗುರುತಿಸಿಲ್ಲ. ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ.

 
೨.ಶಾಲೆಗಳಲ್ಲಿ  ನಮ್ಮ ರಾಷ್ಟ್ರಭಾಷೆ ಹಿಂದಿ ಎಂದು ಕಲಿಸಲಾಗಿತ್ತು ಹಾಗಾದರೆ ಅದು ತಪ್ಪೇ?
ಹೌದು ಅದು ತಪ್ಪು. ಶಾಲೆಗಳಲ್ಲಿ ಹಾಗೆ ಸುಳ್ಳು ಹೇಳಿ ಕೊಡುವ ಮೂಲಕ ಹಿಂದಿಯನ್ನು ಹಿಂಬಾಗಿಲಿನಿಂದ ರಾಷ್ಟ್ರಭಾಷೆ ಎಂದು ಹೇರುವ ಪ್ರಯತ್ನ ಇದಾಗಿದೆ.

 
೩. ಹಾಗಿದ್ದರೆ ಹಿಂದಿಗೆ ಯಾವ ಸ್ಥಾನಮಾನವಿದೆ?
ಹಿಂದಿ, ಇಂಗ್ಲಿಷಿನ ಜೊತೆ ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿದೆ. ಅಧಿಕೃತ ಆಡಳಿತ ಭಾಷೆ ರಾಷ್ಟ್ರಭಾಷೆಯಲ್ಲ.

 
೪. ಆಡಳಿತ ಭಾಷೆಗೂ ರಾಷ್ಟ್ರಭಾಷೆಗೂ ಏನು ವ್ಯತ್ಯಾಸ? ಎರಡು ಒಂದೇ ಅಲ್ಲವೇ?
ಆಡಳಿತ ಭಾಷೆಯೆಂದರೆ ಕೇಂದ್ರ ಸರ್ಕಾರವು ತನ್ನ ವ್ಯವಹಾರಗಳಲ್ಲಿ ಆ ಭಾಷೆಯನ್ನು ಬಳಕೆ ಮಾಡಲಾಗುತ್ತದೆ. ಇನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಂವಹನ ಮಾಡುವಾಗಲೂ ಸಹ ಆಡಳಿತ ಭಾಷೆಯನ್ನು ಬಳಸಬಹುದಾಗಿರುತ್ತದೆ. ಆದರೆ ರಾಷ್ಟ್ರಭಾಷೆಯೆಂದರೆ ಒಂದು ದೇಶದ ರಾಷ್ಟ್ರೀಯತೆಯನ್ನೇ ಬಿಂಬಿಸುವ ಭಾಷೆಯಾಗಿದೆ. ಜರ್ಮನ್ ಜರ್ಮನ್ನರ ರಾಷ್ಟ್ರ ಭಾಷೆ, ಜಪಾನೀಸ್ ಜಪಾನಿಯರ ರಾಷ್ಟ್ರ ಭಾಷೆ, ಆದರೆ ಭಾರತದಂತಹ ಭಾಷಾವಾರು ಪ್ರಾಂತ್ಯಗಳ ಒಕ್ಕೂಟದಲ್ಲಿ ಒಂದು ಭಾಷೆಯನ್ನು ರಾಷ್ಟ್ರಭಾಷೆ ಎಂದು ಮಾಡಲು ಹೊರಡುವುದು ವೈವಿಧ್ಯತೆ ವಿರೋಧಿ ಕ್ರಮವಲ್ಲದೇ ಅದು ಕಾಲಕ್ರಮೇಣ ಹಿಂದಿಯೇತರ ನುಡಿಗಳ ಅಳಿವಿಗೆ ಕಾರಣವಾಗಬಲ್ಲದು.

 
೫. ಹಿಂದಿಯನ್ನು ಒಪ್ಪುವುದರಿಂದ ಕನ್ನಡಿಗರಿಗೆ ಏನು ತೊಂದರೆ?
ಮೊದಲು ಕನ್ನಡ ಜೊತೆ ಹಿಂದಿ ಎಂದು ಒಳ ಬರುವ ಹಿಂದಿ ಕಾಲಕ್ರಮೇಣ ಕನ್ನಡವನ್ನೇ ಹಿಂದೆ ತಳ್ಳಿ ಕನ್ನಡದ ಜಾಗವನ್ನು ಕರ್ನಾಟಕದಲ್ಲಿ ಕಬಳಿಸುತ್ತದೆ. ಹಿಂದಿಯನ್ನು ಒಪ್ಪಿಕೊಳ್ಳುವುದರಿಂದ, ಕನ್ನಡನಾಡಿನ ಎಲ್ಲಾ ವ್ಯವಸ್ಥೆಯಲ್ಲಿಯೂ ಹಿಂದಿಗೆ ಜಾಗ ಕಲ್ಪಿಸುವುದರಿಂದ ಕರ್ನಾಟಕವನ್ನು ಹಿಂದಿ ಭಾಷಿಕ ವಲಸಿಗರ ಪಾಲಿಗೆ ಒಂದು ಸ್ವರ್ಗವಾಗಿಸುವ ಕೆಲಸವಾಗುತ್ತದೆ. ಅನಿಯಂತ್ರಿತ ವಲಸೆಗೆ ಅವಕಾಶವಿರುವ ಇವತ್ತಿನ ವ್ಯವಸ್ಥೆಯಲ್ಲಿ ಹಿಂದಿ ಭಾಷಿಕರಿಗೆ ಎಲ್ಲ ಅನುಕೂಲವೂ ಕಲ್ಪಿಸಲಾಗುವ ಕರ್ನಾಟಕಕ್ಕೆ ಕೋಡಿ ಬಿದ್ದ ಕೆರೆಯಂತೆ ವಲಸೆ ಹರಿದು ಬಂದು ಕರ್ನಾಟಕದ ಜನಲಕ್ಷಣವೇ ಬದಲಾಗಲಿದೆ. ಇದರ ಮುನ್ಸೂಚನೆ ಕರ್ನಾಟಕದ ದೊಡ್ಡ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರಿನಂತಹ ಊರುಗಳಲ್ಲಿ ಈಗಾಗಲೇ ಕಾಣಿಸುತ್ತಿದೆ. ಇದರ ಪರಿಣಾಮವಾಗಿ ಕೆಲ ವರ್ಷದಲ್ಲಿ ಮುಂಬೈನಲ್ಲಾದಂತೆ ನಮ್ಮ ಊರುಗಳೆಲ್ಲ ಹಿಂದಿಮಯವಾಗಿ ಕನ್ನಡವೇ ಕಣ್ಮರೆಯಾಗಬಹುದು. ಕನ್ನಡಿಗರ ಉದ್ಯೋಗ, ಬದುಕು, ನುಡಿ, ಸಂಸ್ಕೃತಿ ಎಲ್ಲದಕ್ಕೂ ಕೊಡಲಿ ಪೆಟ್ಟು ಕೊಡುವಂತಹ ವಲಸೆಗೆ ಹಿಂದಿ ಹೇರಿಕೆ ಉತ್ತೇಜನ ನೀಡುತ್ತೆ.

 
೬. ಭಾರತದ ಬಹುಸಂಖ್ಯಾತ ಜನರಿಗೆ ಹಿಂದಿ ಅರ್ಥವಾಗುತ್ತೆ, ಹಾಗಿದ್ದ ಮೇಲೆ ಹಿಂದಿ ಯಾಕೆ ರಾಷ್ಟ್ರಭಾಷೆಯಾಗಬಾರದು?
ಭಾರತದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಸುಮಾರು 40% ಎನ್ನಲಾಗಿದೆ. ಆದರೆ ಹತ್ತಿರದಿಂದ ನೋಡಿದರೆ ಭೋಜಪುರಿ, ಮೈಥಿಲಿ, ಹರ್ಯಾಣ್ವಿ, ಕನೋಜಿ, ಬೃಜಭಾಷಾ, ರಾಜಸ್ಥಾನಿ ಹೀಗೆ ಹಲವು ಪ್ರತ್ಯೇಕ ನುಡಿಗಳನ್ನೆಲ್ಲ ಹಿಂದಿಯ ಉಪಭಾಷೆಗಳು ಅನ್ನುವ ಹೊದಿಕೆಯಡಿ ತಂದು ಹಿಂದಿ ಭಾಷಿಕರ ಸಂಖ್ಯೆಯನ್ನು 40%ಕ್ಕೆ ತಂದು ನಿಲ್ಲಿಸಿದ್ದಾರೆ. ಅಷ್ಟಕ್ಕೂ ಬಹುಸಂಖ್ಯಾತರು ಅನ್ನುವ ಕಾರಣಕ್ಕೆ ಹಿಂದಿಗೆ ರಾಷ್ಟ್ರ ಭಾಷೆ ಅನ್ನುವುದು ಒಂದು ಬಹುಸಂಖ್ಯಾತರ ಪರವಾದ ವಾದ. ಅದು ಭಾರತದಂತಹ ಹಲವು ಭಾಷೆಗಳ ನಾಡಿಗೆ ಎಂದಿಗೂ ಒಪ್ಪಿಗೆಯಾಗದ ವಾದ. ಹಿಂದಿ ರಾಷ್ಟ್ರಭಾಷೆ ಅಂದ ತಕ್ಷಣ ಒಂದು ನುಡಿಗೆ ಹೆಚ್ಚಿನ ಮನ್ನಣೆ ಇನ್ನುಳಿದ ನುಡಿಗಳ ಕಡೆಗಣನೆಗೆ ವ್ಯವಸ್ಥೆಯೇ ದಾರಿ ಮಾಡಿಕೊಟ್ಟಂತಾಗುತ್ತದೆ. ಹಿಂದಿ ಹೇರಿಕೆಯ ಹೊರೆಯಿಂದಾಗಿ ಈಗಾಗಲೇ  ಉದ್ಯೋಗ, ಶಿಕ್ಷಣ, ಆಡಳಿತ, ಮನರಂಜನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಹಿಂದಿಯೇತರ ನಾಡುಗಳು ತೊಂದರೆ ಅನುಭವಿಸುತ್ತಿವೆ. ಹಿಂದಿಯನ್ನು ರಾಷ್ಟ್ರ ಭಾಷೆಯಾಗಿಸುವ ಪ್ರಯತ್ನ ಭಾರತದ ಒಗ್ಗಟ್ಟನ್ನು ಹೆಚ್ಚಿಸದೇ ಭಾರತೀಯರಲ್ಲಿ ಒಡಕು ಮೂಡಿಸುತ್ತದೆ.

 
೭. ನಮ್ಮ ದೇಶಕ್ಕೊಂದು ಸಂಪರ್ಕ ಭಾಷೆ ಬೇಡವೇ? ಮತ್ತದು ಹಿಂದಿ ಯಾಕಾಗಬಾರದು?
ದೇಶಕ್ಕೊಂದು ಸಂಪರ್ಕ ಭಾಷೆ ಬೇಕು ಎಂದು ಒಂದು ಪ್ರದೇಶದ ನುಡಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟ ಕೂಡಲೇ ಇನ್ನುಳಿದ ನುಡಿಗಳು ಕಡೆಗಣನೆಗೆ ಒಳಗಾಗಿ ತಮ್ಮ ತಮ್ಮ ನೆಲೆಯಲ್ಲೇ ಬಲಹೀನವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶಕ್ಕೊಂದು ಸಂಪರ್ಕ ಭಾಷೆ ಬೇಕು ಅನ್ನುವುದೇ ಆದರೆ ಆ ಭಾಷೆ ಎಲ್ಲ ಭಾರತೀಯರಿಗೂ ಸಮಾನವಾದ ಅವಕಾಶ ಕಲ್ಪಿಸುವಂತಿರಬೇಕೇ ಹೊರತು ಹಿಂದಿಯಂತೆ ಒಂದು ಭಾಷಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ರೀತಿಯಲ್ಲಿರುವುದಲ್ಲ.

 
೮. ಹಿಂದಿಯನ್ನು ಆಡಳಿತ ಭಾಷೆಯಾಗಿ ಬಳಸುವುದರ ಬಗ್ಗೆ ಭಾರತೀಯ ಸಂವಿಧಾನ ಏನು ಹೇಳುತ್ತದೆ?
ಸಂವಿಧಾನದ XVIIನೇ ಭಾಗವು ಭಾರತದ ಆಡಳಿತ ಭಾಷೆಯ ಬಗ್ಗೆ ಮಾತಾಡುತ್ತದೆ. ಇದರ ಅಡಿಯಲ್ಲಿ ೩೪೩ರಿಂದ ೩೫೧ನೇ ವಿಧಿಯವರೆಗಿನ ಕಾಲಮುಗಳಲ್ಲಿ ಈ ಬಗ್ಗೆ ಬರೆಯಲಾಗಿದೆ. ಹಿಂದೀಯನ್ನು ಭಾರತದ ಆಡಳಿತ ಭಾಷೆಯೆಂದು ಘೋಷಿಸಿರುವುದರ ಜೊತೆಯಲ್ಲಿ ಹಿಂದೀಯ ಪ್ರಚಾರಕ್ಕಾಗಿ ದುಡಿಯಬೇಕಾದ್ದು ಭಾರತ ಸರ್ಕಾರದ ಕರ್ತವ್ಯ ಎಂದು ಹೇಳಿದೆ.

 
೯. ಭಾರತದ ಒಕ್ಕೂಟ ಸರ್ಕಾರವು ಹಿಂದಿಯೇತರರ ಮೇಲೆ ಹೇಗೆ ಹಿಂದಿ ಹೇರಿಕೆ ಮಾಡುತ್ತಿದೆ?
ಭಾರತ ಸರ್ಕಾರ ಶಿಕ್ಷಣ ವ್ಯವಸ್ಥೆಯ ಮೂಲಕ ದೇಶದ ಎಲ್ಲ ಜನರಿಗೆ ಹಿಂದಿ ರಾಷ್ಟ್ರಭಾಷೆ ಅನ್ನುವ ತಪ್ಪು ನಂಬಿಕೆಯನ್ನು ಬಿತ್ತುತ್ತಿದೆ. ಅಲ್ಲದೇ ಭಾರತ ಸರ್ಕಾರ ಜನಸಾಮಾನ್ಯರಿಗಾಗಿ ಕಲ್ಪಿಸುವ ನಾಗರೀಕ ಸೇವೆಗಳಾದ ಅಂಚೆ, ವಿಮೆ, ರೈಲ್ವೆ, ವಿಮಾನ ಸೇವೆ, ಪಿಂಚಣಿ, ಬ್ಯಾಂಕು, ಹೆದ್ದಾರಿ ಹೀಗೆ ಎಲ್ಲೆಡೆ ಹಿಂದಿಯನ್ನು ಕಡ್ಡಾಯವಾಗಿ ಬಳಸುವ ಮತ್ತು ಬಳಸಲು ಉತ್ತೇಜನ ನೀಡುವ ಕ್ರಮದ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ. ರಾಜಭಾಷಾ ಆಯೋಗ ಅನ್ನುವ ಸಮಾನತೆ ವಿರೋಧಿ ಸಂಸ್ಥೆಯ ಮೂಲಕ ಹಿಂದಿ ಪಾಕ್ಷಿಕದ ಹೆಸರಿನಲ್ಲಿ ದೇಶದೆಲ್ಲೆಡೆ ಹಿಂದಿಯನ್ನು ಹರಡುವ ಪ್ರಯತ್ನಕ್ಕೆ ತೆರಿಗೆದಾರರ ಅಪಾರ ಹಣವನ್ನು ವ್ಯಯ ಮಾಡುತ್ತಿದೆ. ಇನ್ನೊಂದೆಡೆ ಸರ್ಕಾರಿ ದೂರದರ್ಶನ ಮತ್ತು ಆಕಾಶವಾಣಿಯಲ್ಲೂ ಕಡ್ಡಾಯ ಹಿಂದಿ ಕಾರ್ಯಕ್ರಮಗಳ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ಯಾವುದೇ ಉದ್ಯೋಗ ಪಡೆಯಲು ಹಿಂದಿ ಗೊತ್ತಿರಲೇಬೇಕು ಅನ್ನುವ ಶರತ್ತುಗಳ ಮೂಲಕ ಹಿಂದಿಯೇತರರನ್ನು ಕೇಂದ್ರ ಸರ್ಕಾರಿ ಉದ್ಯೋಗಗಳಿಂದ ದೂರವಿಡುವ ಕೆಲಸ ಮಾಡುತ್ತಿದೆ. ಅಲ್ಲದೇ ಹಿಂದಿ ಕಲಿತರಷ್ಟೇ ಉದ್ಯೋಗ ಅನ್ನುವ ಒತ್ತಾಯದ ಕ್ರಮದಿಂದಾಗಿ ಹಿಂದಿ ಕಲಿಯಲೇಬೇಕಾದ ಒತ್ತಡದ ಸ್ಥಿತಿಯನ್ನು ನಿರ್ಮಿಸುತ್ತಿದೆ. ಇದೆಲ್ಲವೂ ಹಿಂದಿ ಹೇರಿಕೆಯ ಕ್ರಮಗಳೇ ಆಗಿವೆ.

 
೧೦. ಈ ಎಲ್ಲಾ ಪ್ರಯತ್ನಗಳು ಹೇಗೆ ಶುರುವಾದವು? ಇದನ್ನು ಶುರುವಿನಲ್ಲೇ ಯಾರೂ ವಿರೋಧಿಸಲ್ಲಿಲ್ಲವೇ?
ನಮಗೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ನಮ್ಮ ದೇಶದಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದಲೇ ಬ್ರಿಟೀಷರು ಬಂದು ನಮ್ಮನ್ನು ಆಳುವಂತಾಯಿತು. ಹೀಗಾಗಿ ಒಗ್ಗಟ್ಟು ಮೂಡಿಸಲು ಒಂದು ನುಡಿಯ ಅಗತ್ಯವಿದೆ ಮತ್ತದು ಹಿಂದಿಯೇ ಆಗಬೇಕು ಅನ್ನುವ ಭಾವನೆ ಗಾಂಧಿ ಸೇರಿದಂತೆ ಹೆಚ್ಚಿನ ನಾಯಕರಿಗಿತ್ತು. ಅವರು ಮುಂದೊಂದು ದಿನ ಈ ನಿಲುವು ಹಿಂದಿಯೇತರ ನುಡಿಗಳ ಮೇಲೆ ಮಾಡಬಹುದಾದ ಪರಿಣಾಮಗಳನ್ನು ಅಂದು ಊಹಿಸಿರಲಿಲ್ಲ ಅನ್ನುವುದು ಸ್ಪಷ್ಟ. ಸ್ವಾತಂತ್ರ್ಯ ಬಂದ ನಂತರ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡುವ ನಿಲುವಿನ ವಿರುದ್ಧ ತಮಿಳುನಾಡು, ಬಂಗಾಲ, ಕರ್ನಾಟಕದಲ್ಲಿ ದನಿ ಕೇಳಿ ಬಂತು. ಮುಂದೆ ಅದು ತಾರಕಕ್ಕೇರಿ ದೇಶವೇ ಒಡೆದು ಹೋಗಬಹುದು ಅನ್ನುವ ಸ್ಥಿತಿ ಬಂದಾಗ ಹಿಂದಿಯ ಜೊತೆ ಇಂಗ್ಲಿಷ್ ಅನ್ನು ಉಳಿಸಿಕೊಂಡು ಅವೆರಡನ್ನು ಆಡಳಿತ ಭಾಷೆ ಅನ್ನುವ ಹೆಸರಿನಿಂದ ಕರೆಯಲಾಯಿತು.  ಆದರೆ ಅಂದಿನಿಂದಲೂ ಹಿಂಬಾಗಿಲಿನಿಂದ ಹಿಂದಿಯನ್ನು ರಾಷ್ಟ್ರಭಾಷೆ ಎಂಬಂತೆ ಬಿಂಬಿಸುತ್ತ, ಅದರ ಹರವನ್ನು ಹೆಚ್ಚಿಸುವ ಪ್ರಯತ್ನ ಸದ್ದಿಲದೇ ಸಾಗಿದೆ.

 
೧೧. ನಮ್ಮ ದೇಶದಲ್ಲಿ ಹಲವಾರು ಭಾಷೆಗಳಿವೆ, ಎಲ್ಲಾ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ಹೇಗೆ?
ಆಯಾ ರಾಜ್ಯಗಳಲ್ಲಿ ಅವರವರ ಭಾಷೆಯನ್ನು ಬಳಕೆ ಮಾಡಬೇಕು, ರಾಜ್ಯ ರಾಜ್ಯಗಳ ನಡುವಿನ ಸಂಪರ್ಕಕ್ಕೆ ಯಾವ ಭಾಷೆ ಬಳಸಬೇಕು ಅನ್ನುವ ಆಯ್ಕೆಯನ್ನು ಆ ರಾಜ್ಯಗಳಿಗೆ ಬಿಟ್ಟು ಬಿಡಬೇಕು. ಕೇಂದ್ರದ ಜೊತೆ ಸಂಪರ್ಕಕ್ಕೆ ಸ್ಥಳೀಯ ನುಡಿಯ ಜೊತೆ ಇಂಗ್ಲಿಷನ್ನು ಬೇಕಿದ್ದರೆ ಬಳಸಬಹುದು. ಇವೆಲ್ಲವೂ ಬೇರೆ ಬೇರೆ ಸಾಧ್ಯತೆಗಳು. ಒಟ್ಟಾರೆ ಭಾರತದ ನುಡಿ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ನುಡಿಗಳು, ಉಳಿದು ಬೆಳೆಯುವ ರೀತಿಯಲ್ಲಿ ಭಾಷಾ ನೀತಿ ರೂಪಿಸುವುದು ಅಸಾಧ್ಯವೇನಲ್ಲ. ಅದಕ್ಕೆ ಬೇಕಿರುವುದು ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಕಲ್ಪಿಸಬೇಕು ಅನ್ನುವ ಮನಸ್ಥಿತಿಯೇ ಹೊರತು ಯಾಕೆ ಆಗದು ಎಂದು ನೆಪ ಹೇಳುವ ಮನಸ್ಥಿತಿಯಲ್ಲ.

 
೧೨.ಮಕ್ಕಳಿಗೆ ಚಿಕ್ಕಂದಿನಲ್ಲಿ ಹಲವು ಭಾಷೆ ಕಲಿಯುವ ಸಾಮರ್ಥವಿರುತ್ತದೆ ಹೀಗಿರುವಾಗ ಹಿಂದಿ ಕಲಿಸಿದರೆ ತಪ್ಪೇನು?
ಸ್ವಂತ ಇಚ್ಚೆಯಿಂದ ಯಾರು ಯಾವ ಭಾಷೆಯನ್ನೂ ಕಲಿಯುವುದು ಸಹ ತಪ್ಪಲ್ಲ, ಅದಕ್ಕೆ ಎಲ್ಲ ಅವಕಾಶಗಳು ಎಲ್ಲರಿಗೂ ಮುಕ್ತವಾಗಿರಬೇಕು. ಆದರೆ ಸರ್ಕಾರವೇ ಮುಂದೆ ನಿಂತು ಒಂದು ಭಾಷೆಗೆ ಹೆಚ್ಚಿನ ಮನ್ನಣೆ ಕೊಟ್ಟು ಉಳಿದವನ್ನು ಎರಡನೆಯ ದರ್ಜೆಗೆ ಇಳಿಸುವುದು ಪ್ರಜಾಪ್ರಭುತ್ವದಲ್ಲಿ ಒಪ್ಪಲಾಗದ್ದು. ಅಲ್ಲದೇ ಒಂದು ಭಾಷಿಕ ನಾಡಿನಲ್ಲಿ ಅಲ್ಲಿನ ಸ್ಥಳೀಯ ಭಾಷೆ ಕಲಿತುಕೊಳ್ಳುವ ಆಯ್ಕೆಯೇ ಇಲ್ಲದೆ ಅದರ ಜಾಗದಲ್ಲಿ ಹಿಂದಿ ಆಯ್ಕೆಯನ್ನು ಮಾತ್ರ ಕೊಡುವುದು ಹಿಂಬಾಗಿಲಿನಿಂದ ಹಿಂದಿ ಹೇರಿಕೆ ಮಾಡುವ ಪ್ರಯತ್ನವೇ ಆಗಿದೆ.

 
೧೩. ತ್ರಿಭಾಷಾ ಸೂತ್ರ ಎಂದರೇನು? ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಲು ಇದು ಸಾಕಾಗುವುದಿಲ್ಲವೇ?
ತ್ರಿಭಾಷಾ ಸೂತ್ರ ಆಡಳಿತಕ್ಕಾಗಿ ರೂಪಿಸಿದ ಸೂತ್ರ ಅಲ್ಲವೇ ಅಲ್ಲ. ಅದು ಶಾಲಾ ಹಂತದಲ್ಲಿ ಮೂರು ಭಾಷೆಗಳನ್ನು ಕಲಿಸಲು ಉತ್ತೇಜನ ನೀಡಲೆಂದು ಹಮ್ಮಿಕೊಳ್ಳಲಾದ ಸೂತ್ರ. ಅದರಂತೆ ದಕ್ಷಿಣ ಭಾರತದಲ್ಲಿ ಅಲ್ಲಿನ ಸ್ಥಳೀಯ ನುಡಿ, ಇಂಗ್ಲಿಷ್ ಜೊತೆ ಉತ್ತರದ ನುಡಿಯೊಂದನ್ನು ಕಲಿಸುವ ವ್ಯವಸ್ಥೆ ಇರಬೇಕು ಹಾಗೂ ಉತ್ತರ ಭಾರತದಲ್ಲಿ ಅಲ್ಲಿನ ಸ್ಥಳೀಯ ನುಡಿ, ಇಂಗ್ಲಿಷ್ ಜೊತೆ ದಕ್ಷಿಣದ ನುಡಿಯೊಂದನ್ನು ಕಲಿಸಬೇಕು ಅನ್ನುವ ಸೂತ್ರ ಎಂಬಂತೆ ಬಿಂಬಿಸಲಾಗಿತ್ತು. ಆದರೆ ದಕ್ಷಿಣದಲ್ಲಿ ಉತ್ತರದ ನುಡಿಯೆಂದು ಕೇವಲ ಹಿಂದಿಯೊಂದನ್ನೇ ಕಲಿಸಲು ಮುಂದಾದದ್ದು ಹಿಂದಿ ಹೇರಿಕೆಯ ಒಂದು ಭಾಗವೆಂದೇ ನೋಡಬೇಕು. ಅಂತೆಯೇ ಉತ್ತರದ ರಾಜ್ಯಗಳಲ್ಲಿ ದಕ್ಷಿಣದ ಯಾವ ನುಡಿಯನ್ನು ಕಲಿಸದೇ ಕೇವಲ ದ್ವಿಭಾಷಾ ಸೂತ್ರವಾಗಿಸಿಕೊಂಡು ಅಲ್ಲಿನ ಮಕ್ಕಳ ಕಲಿಕೆಯ ಹೊರೆಯನ್ನು ಕಡಿಮೆ ಮಾಡಿಕೊಂಡಿದ್ದನ್ನು ಗಮನಿಸಬೇಕು. ಮುಂದೆ ಬರೀ ಶಾಲೆಗೆ ಸೀಮಿತವಾಗಬೇಕಿದ್ದ ಈ ತ್ರಿಭಾಷಾ ಸೂತ್ರವನ್ನು ಅಸ್ತ್ರವಾಗಿಸಿಕೊಂಡು ಇದನ್ನು ಆಡಳಿತದ ಎಲ್ಲ ಹಂತದಲ್ಲೂ ಹೇರಲು ಮುಂದಾಗಿ, ಈಗ ಕೇಂದ್ರ ಸರ್ಕಾರದ ಹೆಚ್ಚಿನ ಕಚೇರಿಗಳಲ್ಲಿ ಸ್ಥಳೀಯ ನುಡಿಯನ್ನೇ ಕೈಬಿಟ್ಟು ಹಿಂದಿ, ಇಂಗ್ಲಿಷಿಗೆ ಮಾತ್ರ ಮನ್ನಣೆ ನೀಡಲಾಗುತ್ತಿದೆ. ಇದಕ್ಕೆ ಕಾರಣ ಹಿಂದಿಯನ್ನು ಹರಡಲೇಬೇಕು ಅನ್ನುವ ನಿಲುವಿಟ್ಟುಕೊಂಡು ಎಲ್ಲ ಕಚೇರಿಗಳಲ್ಲಿ ಹಿಂದಿ ಬಳಕೆ ಹೆಚ್ಚಿಸುವ ಕೆಲಸ ಮಾಡುತ್ತಿರುವ ರಾಜಭಾಷಾ ಆಯೋಗ. ಯಾವ ಸಂಸ್ಥೆಗೆ ಎಲ್ಲೆಡೆ ಹಿಂದಿ ಮಾತ್ರ ಹರಡಬೇಕು ಅನ್ನುವ ಕಾಳಜಿಯಿದೆಯೋ ಆ ಸಂಸ್ಥೆ ತ್ರಿಭಾಷಾ ಸೂತ್ರ ಪಾಲನೆಯಾಗಲಿ ಎಂದು ಬಯಸಲು ಸಾಧ್ಯವೇ? ಇಂತಹ ತ್ರಿಭಾಷಾ ಸೂತ್ರದ ಅಗತ್ಯವೇ ಇಲ್ಲ. ಪ್ರತಿ ರಾಜ್ಯದಲ್ಲೂ ಅಲ್ಲಿನ ಭಾಷೆಯ ಜೊತೆ ಪರ ಭಾಷಿಕರಿಗೆ ವ್ಯವಹರಿಸಲು ಸಾಧ್ಯವಾಗುವಂತೆ ಇಂಗ್ಲಿಷ್ ಹೊಂದಿರುವ ದ್ವಿಭಾಷಾ ಸೂತ್ರ ಸಾಕು. ಎಲ್ಲೆಡೆ ಹಿಂದಿಗೆ ವಿಶೇಷ ಜಾಗ ಕಲ್ಪಿಸುತ್ತ ಹೋದರೆ ಇಡೀ ಭಾರತ ಹಿಂದಿ ಭಾಷಿಕರಿಗೆ ವಸಾಹತಿನಂತೆ ಕಾಣಿಸಿದರೆ ಅಚ್ಚರಿಯೇನಿಲ್ಲ.

 
೧೪. ಈ ಸಮಸ್ಯೆಗೆ ಪರಿಹಾರವೇನು?
ಹಿಂದಿಭಾಷೆಗೆ ಮಾತ್ರ ಹೆಚ್ಚುಗಾರಿಕೆ ಕೊಡುತ್ತಿರುವ ಈಗಿನ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೆ ಕೇಂದ್ರ ಸರ್ಕಾರದ ಆಡಳಿತ ಭಾಷೆಯ ಸ್ಥಾನಮಾನ ನೀಡಿ ಭಾಷಾ ಸಮಾನತೆಗೆ ಒತ್ತು ನೀಡಬೇಕು. ಆಯಾ ರಾಜ್ಯದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ, ಕೋರ್ಟು-ಕಚೇರಿಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಮೊದಲ ಸ್ಥಾನ ಸಿಗುವಂತೆ ಸಂವಿಧಾನ ತಿದ್ದುಪಡಿಯಾಗಬೇಕು.

 
೧೫. ಕರ್ನಾಟಕದಲ್ಲಿ ಸಮಾನ ಭಾಷನೀತಿಗಾಗಿ ಒತ್ತಾಯಿಸಿ ಇದುವರೆಗೂ ನಡೆದಿರುವ ಹೋರಾಟಗಳೇನು?
ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಚಳುವಳಿಗಳಾಗಿತ್ತು. ಮುಂದೆ ಕುವೆಂಪು ಅವರ ಕಾಲದಲ್ಲಿ ಅವರು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದ್ದರು. ತ್ರಿಭಾಷಾ ಸೂತ್ರ ಕನ್ನಡದ ಮಕ್ಕಳ ಎದೆಗೆ ತಿವಿದ ತ್ರಿಶೂಲವೇ ಆಗಿದೆ ಅನ್ನುವ ಅರ್ಥದಲ್ಲಿ  ಈ ಕೆಳಗಿನ ಮಾತುಗಳನ್ನು ಹೇಳಿದ್ದರು.

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!

ನಂತರ ತೊಂಬತ್ತರ ದಶಕದಲ್ಲಿ ಅಷ್ಟಾಗಿ ಕರ್ನಾಟಕದಲ್ಲಿ ಇದರ ಬಗ್ಗೆ ಕೂಗು ಎದ್ದಿರಲಿಲ್ಲ. ಆದರೆ ಜಾಗತೀಕರಣಕ್ಕೆ ಭಾರತ ತೆರೆದುಕೊಂಡು ನಂತರ ಪ್ರಗತಿಪರ ರಾಜ್ಯಗಳಲ್ಲೊಂದಾದ ಕರ್ನಾಟಕದಲ್ಲಿ ಹುಟ್ಟಿದ ಉದ್ಯೋಗವಕಾಶಗಳ ದೆಸೆಯಿಂದಾಗಿ ಕರ್ನಾಟಕಕ್ಕೆ ಅನಿಯಂತ್ರಿತವಾಗಿ ಹಿಂದಿ ಭಾಷಿಕರ ವಲಸೆ ಶುರುವಾದ ನಂತರ ಈ ಸಮಸ್ಯೆ ಅತ್ಯಂತ ಗಂಭೀರ ಸ್ವರೂಪದಲ್ಲಿ ಕನ್ನಡಿಗರನ್ನು ಕಾಡತೊಡಗಿದೆ. ಬೆಂಗಳೂರಿನ ಸಾರ್ವಭೌಮ ನುಡಿಯಾಗಿದ್ದ ಕನ್ನಡದ ಸ್ಥಾನವನ್ನೇ ಈಗ ಕಿತ್ತುಕೊಳ್ಳುವ ಹಂತಕ್ಕೆ ಹಿಂದಿ ಹೇರಿಕೆ ಹೋಗುತ್ತಿದೆ. ಇತ್ತೀಚಿಗೆ ಬೆಂಗಳೂರಿನ ನಗರ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯಾಗುತ್ತಿರುವುದನ್ನು ಇಲ್ಲಿ ನೆನೆಯಬಹುದು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಪ್ರಬಲ ದನಿ ಕೇಳಿ ಬರಲಾರಂಭಿಸಿದೆ. ಬನವಾಸಿ ಬಳಗ ಈ ಬಗ್ಗೆ ಅಂತರ್ಜಾಲ, ಪ್ರಕಾಶನಗಳ ಮೂಲಕ ಜನ ಜಾಗ್ರತಿ ಮೂಡಿಸುತ್ತಿದೆ. ಸೆಪ್ಟಂಬರ್ ಸಮಯದ ಹಿಂದಿ ಪಾಕ್ಷಿಕದ ಅವಧಿಯನ್ನು ಕರಾಳ ದಿನಗಳೆಂಬಂತೆ ಪ್ರತಿಭಟಿಸುತ್ತ ಬಂದಿದೆ. ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಭಾಷಾ ಸಮಾನತೆಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿದೆ. ಇನ್ನೊಂದೆಡೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಬಿಜಾಪುರದಲ್ಲಿ 2013ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಕಲ್ಪಿಸುವಂತೆ ನಿರ್ಣಯ ಕೈಗೊಂಡಿದೆ. ಕರ್ನಾಟಕದಲ್ಲಿ ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಯೂ ಹಿಂದಿ ಹೇರಿಕೆಯನ್ನು ವಿರೋಧಿಸಿ ರಾಜ್ಯಾದ್ಯಾಂತ ಹೋರಾಟ ಮಾಡುತ್ತ ಬಂದಿದೆ.

 
೧೬. ಈ ಸಮಸ್ಯೆಗೆ ಪರಿಹಾರವೇನು?
ಇದೊಂದು ರಾಜಕೀಯವಾದ ಸಮಸ್ಯೆಯಾಗಿರುವುದರಿಂದ ಇದಕ್ಕೆ ಪರಿಹಾರವೂ ರಾಜಕೀಯವಾದದ್ದೇ ಆಗಿದೆ. ಕರ್ನಾಟಕದಲ್ಲಿ ಈ ಬಗ್ಗೆ ವ್ಯಾಪಕ ಜನಜಾಗ್ರತಿ, ಜನಾಭಿಪ್ರಾಯ ರೂಪಿಸುವ ಕೆಲಸಗಳಾಗುತ್ತಿದ್ದು, ಅದು ಇನ್ನಷ್ಟು ವ್ಯಾಪಕವಾಗಬೇಕಿದೆ. ಇಂತಹ ನಿರಂತರ ಒತ್ತಡದ ಮೂಲಕ ಭಾಷಾ ನೀತಿ ಬದಲಾಗಬೇಕೆಂಬ ಬೇಡಿಕೆಯನ್ನು ರಾಜ್ಯದ ರಾಜಕೀಯ ಪಕ್ಷಗಳು ಎತ್ತಿಕೊಳ್ಳುವಂತಹ ಒತ್ತಡವನ್ನು ತರಬೇಕಿದೆ. ಜೊತೆಯಲ್ಲೇ ಈ ಬೇಡಿಕೆಯನ್ನು ಪಕ್ಷಗಳ ಪ್ರಣಾಳಿಕೆಯಲ್ಲಿ ಸೇರಿಸುವ ಒತ್ತಡ ರೂಪಿಸಬೇಕಿದೆ. ಇದರ ಜೊತೆ ಬೇರೆ ಬೇರೆ ಹಿಂದಿಯೇತರ ನುಡಿಗಳ ನಾಡಿನಲ್ಲೂ ಈ ಬಗ್ಗೆ ಜಾಗ್ರತಿ ಮೂಡಿಸಲು, ಅಲ್ಲಿನ ನಾಗರೀಕ ಸಮಾಜ, ಚಿಂತಕರು, ರಾಜಕೀಯ ಪಕ್ಷಗಳ ಜೊತೆಗೂಡಿ ಕೆಲಸ ಮಾಡಬೇಕಿದೆ. ಸಂವಿಧಾನ ತಿದ್ದುಪಡಿ ಅನ್ನುವುದು ಬಹಳ ಕಷ್ಟದ ವಿಷಯವಾಗಿರುವುದರಿಂದ ಈ ಬಗ್ಗೆ ವ್ಯಾಪಕ ಜನಾಭಿಪ್ರಾಯ ರೂಪಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ.

 
೧೭. ನಾವೇನು ಮಾಡಬಹುದು? ಹೇಗೆ ಕೈಜೋಡಿಸಬಹುದು?
ನೀವು ನಮ್ಮ ಫೇಸ್ ಬುಕ್ ಗುಂಪನ್ನು ಸೇರಿ ಅಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಸ್ನೇಹಿತರು, ಬಂಧುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ. ಹಿಂದಿ ಹೇರಿಕೆ ಮತ್ತದರ ತೊಂದರೆಗಳ ಬಗ್ಗೆ ಸಮಗ್ರ ಮಾಹಿತಿಯುಳ್ಳ ಹಿಂದಿ ಹೇರಿಕೆ ಹೊತ್ತಗೆಯನ್ನು ಓದಿ, ಗೆಳೆಯರಿಗೂ ಪರಿಚಯಿಸಿ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಭಾರತದ ಎಲ್ಲ ನುಡಿಗಳಿಗೂ ಸಮಾನ ಸ್ಥಾನಮಾನ ಕಲ್ಪಿಸುವ ಬೇಡಿಕೆಗೆ ಕೈ ಜೋಡಿಸಿ.

%d bloggers like this: